ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಇನ್ನೂ ಬೂದಿ ಮುಚ್ಚಿದ ಕೆಂಡ! ಹೌದು, ದಾಖಲೆ ಪ್ರಮಾಣದ ವಿರೋಧದೊಂದಿಗೆ ಟಾಟಾ ಪವರ್ ಕಂಪನಿ ಲಿ.(ಟಿಪಿಸಿಎಲ್) ಅನ್ನು 2 ದಿನಗಳ ಹಿಂದಷ್ಟೇ ವಾಪಸ್ ಕಳುಹಿಸುವ ಮೂಲಕ ರೈತರು, ವಿದ್ಯುತ್ ನೌಕರರು ಮತ್ತಿತರ ಸಂಘ ಸಂಸ್ಥೆಗಳ ಮುಖಂಡರು ಯಶಸ್ವಿಯಾಗಿದ್ದಾರೆ.
ಇದರೊಂದಿಗೆ ನಿಟ್ಟುಸಿರು ಬಿಡುವಷ್ಟರಲ್ಲಿ 2 ಕಂಪನಿಗಳು ಇದೇ ವಿದ್ಯುತ್ ಖಾಸಗೀಕರಣಕ್ಕೆ ಆಸಕ್ತಿ ತೋರಿಸಿರುವುದು ಬೆಳಕಿಗೆಬಂದಿದೆ.
ಮಹೀಂದ್ರಾ ಕಂಪನಿಯು ಈಚೆಗಷ್ಟೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಭೇಟಿ ನೀಡಿದೆ. ಈ ವೇಳೆ ವಿದ್ಯುತ್ ವಿತರಣೆಗೆ ತಾವೂ ಉತ್ಸುಕವಾಗಿದ್ದು ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಏನು? ರಾಜ್ಯದ ವಿದ್ಯುತ್ ಜಾಲದ ವ್ಯವಸ್ಥೆ ಸೇರಿದಂತೆ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದೆ.
ಅಷ್ಟೇ ಅಲ್ಲ, ಮತ್ತೊಂದು ಕಂಪನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಟಿಪಿಸಿಎಲ್‌ನಂತೆ ತಾನೂ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಮಾಡಲು ಉತ್ಸುಕನಾಗಿದ್ದೇನೆ. ಇದ್ಕಕಾಗಿ ಅಗತ್ಯ ಪರವಾನಗಿ ನೀಡಬೇಕು ಎಂದು ಕೆಇಆರ್‌ಸಿಗೆ ಅರ್ಜಿ ಕೂಡ ಸಲ್ಲಿಸಿದೆ. ಆದರೆ, ಈ ಅರ್ಜಿಯ ಪರಿಶೀಲನೆ ಇನ್ನೂ ಆರಂಭಿಕ ಹಂತದಲ್ಲಿದೆ. ವಿಚಾರಣೆಗಾಗಲೀ ಅಥವಾ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸುವ ಹಂತವನ್ನಾಗಲಿ ತಲುಪಿಲ್ಲ ಎಂದು ಆಯೋಗದ ಮೂಲಗಳು 'ಉದಯವಾಣಿ'ಗೆ ತಿಳಿಸಿವೆ.
ಮೂಲಗಳ ಪ್ರಕಾರ ಈಗಾಗಲೇ ವ್ಯಕ್ತವಾದ ವ್ಯಾಪಕ ವಿರೋಧವನ್ನು ನೋಡಿ, ಉಳಿದವರೂ ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ, ಒಂದು ವೇಳೆ ಮಹೀಂದ್ರಾ ಕಂಪನಿಯಾಗಲಿ ಅಥವಾ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತೊಂದು ಕಂಪನಿಯಾಗಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟರೆ, ವಿದ್ಯುತ್ ನೌಕರರು ಮತ್ತು ರೈತರು ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗುವುದು ಅನಿವಾರ್ಯ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಲಂ 108ರ ಅಡಿ ಸೂಚಿಸದ ಸರ್ಕಾರ :
ವಿದ್ಯುತ್ ಕಾಯ್ದೆ ಕಲಂ 108ರ ಅಡಿ ಸರ್ಕಾರವು ಆಯೋಗಕ್ಕೆ ನಿರ್ದೇಶನ ನೀಡುವ ಅಧಿಕಾರವಿದೆ. ಇದನ್ನು ಬಳಸಿಕೊಂಡು ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದು ಆಯೋಗಕ್ಕೆ ಸೂಚಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆಯನ್ನೂ ಮಾಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹಿಂದೆಸರಿಯಿತು ಎನ್ನಲಾಗಿದೆ.
ಕಂಪನಿಗಳಿಗೆ ಒಮ್ಮೆ ಇಂತಹದ್ದೊಂದು ಅವಕಾಶ ಇದೆ ಎಂದು ಗೊತ್ತಾದರೆ, ಪರವಾನಗಿ ನೀಡುವಂತೆ ಒಬ್ಬರನ್ನು ನೋಡಿ ಮತ್ತೊಬ್ಬರು ಮತ್ತೊಬ್ಬರು ಅರ್ಜಿ ಹಾಕುತ್ತಲೇ ಇರುತ್ತಾರೆ. ಆಗ ಖಾಸಗೀಕರಣದ ಚರ್ಚೆ ಹೀಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನ ಸ್ಪಷ್ಟ ನಿಲುವು ಪ್ರಕಟಿಸಿ, ಕಲಂ 108ರ ಅಡಿ ಆಯೋಗಕ್ಕೆ ನಿರ್ದೇಶನ ನೀಡಿದರೆ ಶಾಶ್ವತವಾಗಿ ಇದಕ್ಕೆ ತೆರೆಬೀಳುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಹಿನ್ನೆಲೆ ಏನು?:
ಸುಮಾರು 19 ಜಿಲ್ಲೆಗಳಲ್ಲಿ ಎಸ್ಕಾಂಗಳಿಗೆ ಪರ್ಯಾಯವಾಗಿ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಕೆಇಆರ್‌ಸಿಗೆ ಈಚೆಗೆ ಟಿಪಿಸಿಎಲ್ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದಾಜು 25 ಲಕ್ಷ ಆಕ್ಷೇಪಣೆಗಳು ಬಂದಿದ್ದವು. ಅಷ್ಟೇ ಅಲ್ಲ, ಕೆಪಿಟಿಸಿಎಲ್ ನೌಕರರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಖಾಸಗೀಕರಣ ವಿಚಾರದಲ್ಲಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಮಧ್ಯೆ ಕಂಪನಿಯು ದಿಢೀರ್ ತನ್ನ ಅರ್ಜಿಯನ್ನೇ ವಾಪಸ್ ಪಡೆದಿರುವುದಾಗಿ ಪ್ರಕಟಿಸಿತ್ತು.
ಮಹೀಂದ್ರಾ ಬಗ್ಗೆ ಮಾಹಿತಿ ಇಲ್ಲ
ಕಂಪನಿಯೊಂದು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗೆ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಅದರ ಪರಿಶೀಲನೆ ಪ್ರಗತಿಯಲ್ಲಿದೆ. ಆದರೆ, ಮಹೀಂದ್ರಾ ಕಂಪನಿ ಬಂದು ಭೇಟಿ ನೀಡಿರುವುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. -ಪಿ.ರವಿಕುಮಾರ್, ಅಧ್ಯಕ್ಷ, ಕೆಇಆರ್‌ಸಿ
-ವಿಜಯಕುಮಾರ್ ಚಂದರಗಿ

