Dailyhunt Logo
  • Light mode
    Follow system
    Dark mode
    • Play Story
    • App Story
Vijayapura: ಪೊಲೀಸ್ ನೌಕರಿ ಕೊಡಿಸುವುದಾಗಿ ಹೇಳಿ ವಂಚನೆ: 12 ವರ್ಷಗಳ ಬಳಿಕ ಆರೋಪಿ ಸೆರೆ

Vijayapura: ಪೊಲೀಸ್ ನೌಕರಿ ಕೊಡಿಸುವುದಾಗಿ ಹೇಳಿ ವಂಚನೆ: 12 ವರ್ಷಗಳ ಬಳಿಕ ಆರೋಪಿ ಸೆರೆ

ವಿಜಯಪುರ: ಡಿಎಸ್‌ಪಿ ಎಂದು ಹೇಳಿಕೊಂಡು ಪೊಲೀಸ್ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿ, ಕೊಲೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದ ಖದೀಮನೋರ್ವನನ್ನು 12 ವರ್ಷಗಳ ಬಳಿಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

31 ವರ್ಷದ ವರ್ಷದ ಗ್ಯಾನನಗೌಡ ಅಲಿಯಾಸ್ ಜ್ಞಾನಗೌಡ ಅಲಿಯಾಸ್ ಗಣೇಶ ಅಲಿಯಾಸ್ ಸಿ.ಸಂಪತ್ ಕುಮಾರ ಎಂಬಾತನೇ ಬಂಧಿತ ಆರೋಪಿ.

ಈತ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದ ನಿವಾಸಿಯಾಗಿದ್ದಾನೆ. ತನ್ನನ್ನು ತಾನು ಡಿಎಸ್‌ಪಿ ಎಂದು ಹೇಳಿಕೊಂಡು ಖಾಕಿ ಸಮವಸ್ತ್ರ ಧರಿಸಿಕೊಂಡು ತಿರುಗಾಡುತ್ತಿದ್ದ. ಅಲ್ಲದೆ, ನಿರೋದ್ಯೋಗಿ ಯುವಕರಿಗೆ ಪೊಲೀಸ್ ನೌಕರಿ ಹಾಗೂ ಪಿಎಸ್‌ಐ ನೌಕರಿ ಕೊಡಿಸುತ್ತೇನೆ ಎಂದು ಹೇಳಿ, ಅವರಿಂದ ಹಣ ಪಡೆದು ವಂಚಿಸುತ್ತಿದ್ದ.

2012ರಲ್ಲಿ ವಿಜಯಪುರದ ವಿಠ್ಠಲ ಗ್ಯಾನಪ್ಪ ಛಾಯಾಗೋಳ ಎಂಬಾತನ ಸಂಬಂಧಿಕರ ಮಗನಿಗೆ ಪೊಲೀಸ್ ನೌಕರಿ ಕೊಡಿಸುವುದಾಗಿ ಹೇಳಿ ಈ ಖದೀಮ ಸುಮಾರು 1.20 ಲಕ್ಷ ರೂ. ಹಣ ಪಡೆದಿದ್ದ. ಬಳಿಕ ನೌಕರಿ ಕೊಡಿಸದೆ ಇರುವದರಿಂದ ಕೊಟ್ಟಿದ್ದ ಹಣವನ್ನು ಮರಳಿಸುವಂತೆ ಸಂತ್ರಸ್ತ ಬೇಡಿಕೆ ಇಟ್ಟಿದ್ದ. ಆದರೆ, ಈ ಖದೀಮ ತನ್ನ ಸಹಚರರೊಂದಿಗೆ ಸೇರಿಕೊಂಡು 2014ರಲ್ಲಿ ಸಂತ್ರಸ್ತನನ್ನು ಕಾರಿನಲ್ಲಿ ಹಾಕಿಕೊಂಡು ಅಪಹರಣ ಮಾಡಿದ್ದ. ಬಳಿಕ ಕೊಪ್ಪಳ ಜಿಲ್ಲೆ ಮುನಿರಾಬದ್‌ ಹತ್ತಿರ ಇರುವ ಹುಲಗಿ ಗ್ರಾಮದ ಕೆನಾಲ್‌ದಲ್ಲಿ ಕೈಗಳಿಗೆ ಬೇಡಿ ಹಾಕಿ, ಕಾಲು ಕಟ್ಟಿ ಗೋಣಿ ಚೀಲದಲ್ಲಿ ತುಂಬಿ ನೀರಿನಲ್ಲಿ ಬಿಸಾಕಿ ಕೊಲೆಗೆ ಯತ್ನಿಸಿದ್ದ.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಮುಖ ಆರೋಪಿ ಗ್ಯಾನನಗೌಡ ಹಾಗೂ ಈತನಿಗೆ ಸಹಕರಿಸಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಿದ್ದರು. ಆದರೆ, ಜಾಮೀನು ಸಿಕ್ಕ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಅಲ್ಲದೇ, ತನ್ನ ಹಳೆಯ ಚಾಳಿಯನ್ನೇ ಮುಂದುವರೆದಿದ್ದ.

ಈ ನಡುವೆ ಮುದ್ದೇಬಿಹಾಳ ತಾಲೂಕಿನ ಹಂದ್ರಾಳ ಗ್ರಾಮದ ರೇವಣಸಿದ್ದಪ್ಪ ಬಸಪ್ಪ ದೊಡಮನಿ ಎಂಬುವರ ಮಗನಿಗೆ ಜೈಲರ್‌ ನೌಕರಿ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಹೀಗಾಗಿ ಈತನ ಪತ್ತೆಗೆ ಎಪಿಎಂಸಿ ಠಾಣೆ ಪಿಎಸ್‌ಐ ಬಸವರಾಜ ತಿಪ್ಪರೆಡ್ಡಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ವಂಚಕನನ್ನು ಜುಲೈ 6ರಂದು ಬೆಂಗಳೂರಿನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಆರೋಪಿ ವಿರುದ್ಧ 2012ರಿಂದಲೂ ಮುದ್ದೇಬಿಹಾಳ, ಎಪಿಎಂಸಿ, ಆದರ್ಶನಗರ, ತಾಳಿಕೋಟೆ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani