ವಿಶ್ವಸಂಸ್ಥೆ: ಭಯೋತ್ಪಾದಕರಿಗೆ ಆತಿಥ್ಯ, ತರಬೇತಿ ಮತ್ತು ನಿಯೋಜನೆ ನೀಡುತ್ತಿರುವ ಪಾಕಿಸ್ಥಾನ ಪೆಡಂಭೂತ ರಾಷ್ಟ್ರ, ಅದಕ್ಕೆ ತನ್ನದೇ ಆದ ದೈತ್ಯಾಕಾರದ ಪ್ರತಿ ರೂಪ ಕಚ್ಚಿದಾಗ ಆಘಾತಕ್ಕೊಳಗಾಗುತ್ತದೆ" ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಹೈಕಮಿಷನರ್ ವಾರ್ಷಿಕ ವರದಿಯ ಕುರಿತಾದ ಸಂವಾದದ ಸಂದರ್ಭ ಪಾಕಿಸ್ಥಾನ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಜಮ್ಮು- ಕಾಶ್ಮೀರದ ವಿಷಯವನ್ನು ಎತ್ತಿದ ನಂತರ, ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್‌ನ ಮೊದಲ ಕಾರ್ಯದರ್ಶಿ ಅನುಪಮಾ ಸಿಂಗ್ ಅವರು ಬುಧವಾರ(ಜೂ18) ಈ ಹೇಳಿಕೆಗಳನ್ನು ನೀಡಿದ್ದಾರೆ.
"ಪಾಕಿಸ್ಥಾನ ಮತ್ತು ಒಐಸಿ ಮಾಡಿದ ಉಲ್ಲೇಖಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಈ ಪ್ರತ್ಯುತ್ತರ ಹಕ್ಕನ್ನು ಚಲಾಯಿಸಲು ಒತ್ತಾಯಿಸಲ್ಪಟ್ಟಿದೆ. ಪಾಕಿಸ್ಥಾನ ಮಾಡಿದ ಆಧಾರರಹಿತ ಮತ್ತು ದುರುದ್ದೇಶಪೂರಿತ ಆರೋಪಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ" ಎಂದು ಅನುಪಮಾ ಹೇಳಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ಬಗ್ಗೆ OIC ಮಾಡಿರುವ ಉಲ್ಲೇಖಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ... ದಾಖಲೆಗಾಗಿ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿತ್ತು, ಇದೆ ಮತ್ತು ಯಾವಾಗಲೂ ಉಳಿಯುತ್ತದೆ. ಬಗೆಹರಿಯದ ಏಕೈಕ ಸಮಸ್ಯೆಯೆಂದರೆ ಪಾಕಿಸ್ಥಾನವು ಭಾರತೀಯ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದು ಮತ್ತು ಅವುಗಳನ್ನು ಹಿಂದಿರುಗಿಸದಿರುವುದು" ಎಂದು ದಿಟ್ಟ ತಿರುಗೇಟು ನೀಡಿದ್ದಾರೆ.
''ಭಯೋತ್ಪಾದಕರಿಗೆ ಆಶ್ರಯ ನೀಡುವುದು, ತರಬೇತಿ ನೀಡುವುದು ಮತ್ತು ನಿಯೋಜಿಸುವುದು ಪಾಕಿಸ್ಥಾನದ ರಾಜ್ಯ ನೀತಿಯಾಗಿದೆ. ಆದರೆ ಪಾಕಿಸ್ಥಾನವು ತನ್ನನ್ನು ಭಯೋತ್ಪಾದನೆಯ ಬಲಿಪಶು ಎಂದು ಕರೆದುಕೊಳ್ಳುತ್ತಿದೆ"ಎಂದು ಅನುಪಮಾ ಹೇಳಿದ್ದಾರೆ.

