ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮದ ಕೆಳಗಿನ ವಗ್ಗ ನಿವಾಸಿ, ಆಟೋ ಚಾಲಕ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಮ್ಮದ್ ರಾಯಿಬ್ (21) ಕಾಣೆಯಾದ ಆಟೋ ಚಾಲಕ.
ರಾಯಿಬ್ ವಿವಾಹಿತನಾಗಿದ್ದು ತಂದೆಯ ಮನೆಯ ಸಮೀಪವೇ ವಾಸವಾಗಿದ್ದರು.
ಅವರು ಎ.1ರಂದು ರಾತ್ರಿ ಮದುವೆ ಕಾರ್ಯಕ್ರಮದಿಂದ ತಾಯಿ ಹಾಗೂ ಸಹೋದರಿಯರನ್ನು ಮನೆಗೆ ತಲುಪಿಸಿದ್ದರು. ಬಳಿಕ, ಪ್ರತಿನಿತ್ಯದಂತೆ ತಾತನ ಮನೆಗೆ ತೆರಳಿ ರಾತ್ರಿ ಮಲಗಿದ್ದರು ಎನ್ನಲಾಗಿದೆ.
ಎ.2ರಂದು ಬೆಳಗ್ಗೆ ನಮಾಝ್‌ಗೆ ಎದ್ದ ಅಜ್ಜಿ, ಕೋಣೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ರಾಯಿಬ್ ಕಾಣೆಯಾಗಿರುವುದು ತಿಳಿದುಬಂದಿದೆ. ಅವರ ವಾಹನವೂ ಮನೆಯಿಂದ ಕಾಣೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮಹಮ್ಮದ್ ರಾಯಿಬ್ ಅವರ ತಂದೆ ಅಬ್ದುಲ್ ಲತೀಫ್ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.

