Dailyhunt Logo
  • Light mode
    Follow system
    Dark mode
    • Play Story
    • App Story
WhatsApp ಯೂಸರ್‌ನೇಮ್‌: ಗೌಪ್ಯತೆಯಾ? ಗೊಂದಲವಾ ?

WhatsApp ಯೂಸರ್‌ನೇಮ್‌: ಗೌಪ್ಯತೆಯಾ? ಗೊಂದಲವಾ ?

ಕಲಿ ಹೆಸರು ಬಳಸಿ ಆನ್‌ಲೈನ್‌ ವಂಚನೆ ಎಸಗುವ ಸಾಧ್ಯತೆ ಹೆಚ್ಚಲಿದೆ: ಕೇಂದ್ರ ಸರಕಾರ

ಯೂಸರ್‌ ನೇಮ್‌ ಸೌಲಭ್ಯ ನೀಡಿರುವ ಎಲ್ಲ ಚಾಟ್‌ ಆಯಪ್‌ಗಳಿಗೆ ಕೇಂದ್ರ ನೋಟಿಸ್‌!

ಮೊಬೈಲ್‌ ನಂಬರ್‌ ಹಂಚಿಕೊಳ್ಳದೆಯೂ ವಾಟ್ಸಾಪ್‌ನಲ್ಲಿ ಸಂವಹನ ನಡೆಸಲು ಅನುವು ಮಾಡಿಕೊಡಲು ಮೆಟಾ ಸಂಸ್ಥೆಯು ʼಯೂಸರ್‌ ನೇಮ್‌' ವೈಶಿಷ್ಟ್ಯವನ್ನು ಜಾರಿ ಮಾಡಲು ಮುಂದಾಗಿದೆ.

ಈಗಾಗಲೇ ʼಯೂಸರ್‌ ನೇಮ್‌' ಕಾದಿರಿಸಲು ಬಳಕೆದಾರರಿಗೆ ಸೂಚಿಸಿದೆ. ಇದರ ಬೆನ್ನಲ್ಲೇ "ಯೂಸರ್‌ ನೇಮ್‌' ವೈಶಿಷ್ಟ್ಯಕ್ಕೆ ಕೇಂದ್ರ ಸರಕಾರ ಅಸಮಾಧಾನ ತೋರಿದ್ದು, ಇದರಿಂದ ನಕಲಿ ಐಡಿ ಹಾವಳಿ ಮತ್ತು ಆನ್‌ಲೈನ್‌ ವಂಚನೆ ಹೆಚ್ಚಬಹುದು ಎಂಬ ಕಳವಳ ವ್ಯಕ್ತಪಡಿಸಿದೆ.

ಇದೇ ಕಾರಣಕ್ಕೆ ವಾಟ್ಸಾಪ್‌ ಸಂಸ್ಥೆಗೆ ನೋಟಿಸ್‌ ಸಹ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಏನಿದು ವಾಟ್ಸಾಪ್‌ನ ಹೊಸ ವೈಶಿಷ್ಟ್ಯ? ಇದರಿಂದಾಗುವ ಸಮಸ್ಯೆಯೇನು? ಸರಕಾರ, ಮೆಟಾದ ವಾದವೇನು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ʼಯೂಸರ್‌ ನೇಮ್‌' ಎಂಬ ಕೀಲಿಕೈ

ವಾಟ್ಸಾಪ್‌ ಜಾರಿ ಮಾಡಲು ಮುಂದಾಗಿರುವ ಹೊಸ ವೈಶಿಷ್ಟéದಿಂದಾಗಿ ಬಳಕೆದಾರರು ತಮ್ಮ ಫೋನ್‌ ನಂಬರನ್ನು ಇತರರ ಜತೆ ಹಂಚಿಕೊಳ್ಳದೆ ʼಯೂಸರ್‌ ನೇಮ್‌' ಬಳಸಿ ಚಾಟ್‌ ಮಾಡಬಹುದು. ಒಮ್ಮೆ ʼಯೂಸರ್‌ ನೇಮ್‌' ಬಳಕೆಯನ್ನು ಆರಂಭಿಸಿದರೆ, ಹೊಸದಾಗಿ ಯಾರೊಂದಿಗಾದರೂ ಚಾಟ್‌ ಮಾಡಬೇಕಿದ್ದಲ್ಲಿ ಇದನ್ನು ಹಂಚಿಕೊಂಡರೆ ಸಾಕು. ಫೋನ್‌ ನಂಬರ್‌ ನೀಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಅಲ್ಲದೆ ವಿವಿಧ ವಾಟ್ಸಾಪ್‌ ಗುಂಪುಗಳಿಗೆ ಸೇರಿಕೊಂಡಾಗ ಅಪರಿಚಿತರಿಗೆ ಫೋನ್‌ ನಂಬರ್‌ ಸಿಗುವುದು ತಪ್ಪುತ್ತದೆ. ಟೆಲಿಗ್ರಾಂ, ಸಿಗ್ನಲ್‌, ಇನ್‌ಸ್ಟಾಗ್ರಾಂನಂತೆ ಈ ʼಯೂಸರ್‌ ನೇಮ್‌'ಗಳನ್ನು ಬಳಸಿ ಮತ್ತೂಬ್ಬರ ಜತೆ ಸಂವಹನ ನಡೆಬಹುದು. "ಯೂಸರ್‌ ನೇಮ್‌' ಬಳಕೆ ಮಾಡಿದ ಬಳಿಕವೂ ವಾಟ್ಸಾಪ್‌ ಮೆಸೇಜ್‌ಗಳು ಈಗಿರುವಂತೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ.

ಗೌಪ್ಯತೆ ಹೆಚ್ಚಿಸುವುದಕ್ಕಾಗಿ ಪರಿಚಯ

ವಿವಿಧ ವಾಟ್ಸಾಪ್‌ ಗುಂಪುಗಳಿಗೆ ಸೇರಿಕೊಂಡ ವೇಳೆ ಮೊಬೈಲ್‌ ಸಂಖ್ಯೆ ಅಪರಿಚಿತರಿಗೆ ದೊರೆತು, ಸಮಸ್ಯೆಯಾಗುವ ಆತಂಕವನ್ನು ಬಳಕೆದಾರರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗೌಪ್ಯತೆ ಹೆಚ್ಚಿಸುವುದಕ್ಕಾಗಿ "ಯೂಸರ್‌ ನೇಮ್‌' ವೈಶಿಷ್ಟéವನ್ನು ಜಾರಿ ಮಾಡುತ್ತಿರುವುದಾಗಿ ವಾಟ್ಸಾಪ್‌ ಹೇಳಿದೆ.

ಆದರೂ ಈಗಾಗಲೇ ಭಾರತದಲ್ಲಿ ʼಯೂಸರ್‌ ನೇಮ್‌' ಅವಕಾಶವನ್ನು ಒದಗಿಸಿರುವ ಟೆಲಿಗ್ರಾಂ, ಸಿಗ್ನಲ್‌ನಂತಹ ಆಯಪ್‌ಗಳಿಗೆ ಸ್ಪರ್ಧೆ ಒಡ್ಡಲು ವಾಟ್ಸಾಪ್‌ ಈ ವೈಶಿಷ್ಟéವನ್ನು ಜಾರಿ ಮಾಡಿದೆ. ಭಾರತದಲ್ಲಿ ಸುಮಾರು 50 ಕೋಟಿಗೂ ಹೆಚ್ಚು ಜನರು ವಾಟ್ಸಾಪ್‌ ಬಳಕೆ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಸಣ್ಣ ಪ್ರಮಾಣದ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇಂತಹವರು ಹೆಚ್ಚಿನ ಜನರನ್ನು ಸುರಕ್ಷೆಯೊಂದಿಗೆ ತಲುಪಲು ʼಯೂಸರ್‌ ನೇಮ್‌' ನೆರವಾಗುತ್ತದೆ.

ಗೌಪ್ಯತೆಯಿಂದ ಲಾಭ, ನಷ್ಟ ಎರಡೂ ಇದೆ

ವಾಟ್ಸಾಪ್‌ ಜಾರಿ ಮಾಡಲು ಮುಂದಾಗಿರುವ "ಯೂಸರ್‌ ನೇಮ್‌' ವೈಶಿಷ್ಟéವು ಬಳಕೆದಾರರ ಗೌಪ್ಯತೆಗೆ ನೆರವಾಗುವುದರ ಜತೆಗೆ, ಬಹಳಷ್ಟು ಸಮಸ್ಯೆಯನ್ನೂ ಉಂಟು ಮಾಡುತ್ತದೆ. ಇದರಿಂದಾಗಿ ಲಾಭವೆಂದರೆ ಫೋನ್‌ ನಂಬರ್‌ ಎಲ್ಲರಿಗೂ ದೊರೆಯುವುದನ್ನು ತಡೆಯುತ್ತದೆ, ಫೋನ್‌ ಸಂಖ್ಯೆ ಗೊತ್ತಿರುವವರು, ಯೂಸರ್‌ ನೇಮ್‌ನಿಂದ ಸಂಪರ್ಕ ಹೊಂದಿರುವವರನ್ನು ಸುಲಭವಾಗಿ ಗುರುತಿಸಿ ವಿಭಾಗಿಸಲು ಇದು ನೆರವಾಗುತ್ತದೆ.

ಇದರ ಜತೆಗೆ ಖ್ಯಾತ ವ್ಯಕ್ತಿಗಳು, ಸರಕಾರಿ ಸಂಸ್ಥೆಗಳ ಹೆಸರಲ್ಲಿ ʼಯೂಸರ್‌ ನೇಮ್‌' ರಚಿಸಿ ಸುಲಭವಾಗಿ ನಂಬಿಸುವ ಅವಕಾಶವನ್ನು ತೆರೆದಿಡುತ್ತದೆ. ಅಲ್ಲದೇ ʼಯೂಸರ್‌ ನೇಮ್‌' ಬಳಸಿ ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಖಾತೆಗಳನ್ನು ಪತ್ತೆ ಹಚ್ಚುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಫೋನ್‌ ನಂಬರ್‌ ಮೆಟಾದ ದತ್ತಾಂಶದಲ್ಲಿ ಶಾಶ್ವತವಾಗಿ ನೋಂದಣಿಯಾಗುತ್ತದೆ.

ಆನ್‌ಲೈನ್‌ ವಂಚನೆಯ ಸಾಧ್ಯತೆ ಹೆಚ್ಚು

ʼಯೂಸರ್‌ ನೇಮ್‌' ವೈಶಿಷ್ಟ್ಯವು ಆನ್‌ಲೈನ್‌ನಲ್ಲಿ ನಡೆಯುತ್ತಿರುವ ವಂಚನೆಗಳ ಪ್ರಮಾಣವನ್ನು ಹೆಚ್ಚು ಮಾಡಬಹುದು. ʼಯೂಸರ್‌ ನೇಮ್‌'ಗಳನ್ನು ಮೊದಲೇ ಕಾದಿರಿಸಲು ಸೂಚಿಸಿರುವುದರಿಂದ ಖ್ಯಾತ ವ್ಯಕ್ತಿಗಳು, ಬ್ಯಾಂಕ್‌ಗಳು, ಸರಕಾರಿ ಸಂಸ್ಥೆಗಳು, ಪೊಲೀಸರ ಹೆಸರಲ್ಲಿ ಹೆಸರುಗಳನ್ನು ರಚಿಸಬಹುದು.

ಮುಂದಿನ ದಿನಗಳಲ್ಲಿ ಇವುಗಳನ್ನು ಬಳಸಿ ಜನರನ್ನು ವಂಚನೆಗೆ ದೂಡಬಹುದು. ವಾಟ್ಸಾಪ್‌ನಲ್ಲಿ ಫೋನ್‌ ನಂಬರ್‌ನೀಡುತ್ತಿದ್ದ ನಂಬಿಕೆಯನ್ನು "ಯೂಸರ್‌ ನೇಮ್‌' ಕಸಿದುಕೊಳ್ಳುವ ಮೂಲಕ ಮತ್ತೂಬ್ಬ ವ್ಯಕ್ತಿಯ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಬಹುದು. ಭಾರತದಲ್ಲಿ ಮೊಬೈಲ್‌ ಸಂಖ್ಯೆ ಮತ್ತು ಒಟಿಪಿ ವ್ಯವಸ್ಥೆ ಬಲವಾಗಿದ್ದರೂ ಜನ ಆನ್‌ಲೈನ್‌ ಮೋಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿದ್ದಾರೆ. ಹೀಗಾಗಿ ʼಯೂಸರ್‌ ನೇಮ್‌' ವೈಶಿಷ್ಟ್ಯವು ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬಹುದು.

ಬಳಕೆದಾರರೇ ಎಚ್ಚರಿಕೆ ವಹಿಸಬೇಕು

ವಾಟ್ಸಾಪ್‌ ʼಯೂಸರ್‌ ನೇಮ್‌'ಗೆ ಸಂಬಂಧಿಸಿದಂತೆ ಸುರಕ್ಷಿತ ಮಾನದಂಡಗಳು ರಚನೆಯಾಗುವ ಮೊದಲೇ ಅದು ಜಾರಿಯಾದರೆ, ಬಳಕೆದಾರರೇ ಎಚ್ಚರಿಕೆಯಿಂದ ಅದನ್ನು ಬಳಕೆ ಮಾಡಬೇಕು. ʼಯೂಸರ್‌ ನೇಮ್‌'ಗಳನ್ನು ಸಂಪೂರ್ಣವಾಗಿ ನಂಬುವ ಮೊದಲು ಅದು ನಿಜವಾದ ವ್ಯಕ್ತಿಯದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್‌ಗಳು, ಸರಕಾರಿ ಸಂಸ್ಥೆಗಳ ಹೆಸರಲ್ಲಿ ಬರುವ ಸಂದೇಶಗಳನ್ನು ನಂಬುವ ಮೊದಲು ಪುನಃ ಪರಿಶೀಲನೆ ನಡೆಸಬೇಕು. ಯಾವುದೇ ʼಯೂಸರ್‌ ನೇಮ್‌'ನಿಂದ ಲಿಂಕ್‌ಗಳು ಬಂದಲ್ಲಿ ಅದನ್ನು ಓಪನ್‌ ಮಾಡದೇ ಇರಬೇಕು.

ಕೇಂದ್ರ ಸರಕಾರದ ವಾದವೇನು?

ʼಯೂಸರ್‌ ನೇಮ್‌' ವೈಶಿಷ್ಟ್ಯದಿಂದ ಆನ್‌ಲೈನ್‌ ವಂಚನೆ ಪ್ರಕರಣಗಳ ಪ್ರಮಾಣ ಹೆಚ್ಚಬಹುದು.

ಡಿಜಿಟಲ್‌ ಅರೆಸ್ಟ್‌ ಮೂಲಕ ಸುಲಿಗೆ ಮಾಡಲು ವಂಚಕರಿಗೆ ಅವಕಾಶ ದೊರೆಯಬಹುದು.

ಸಾರ್ವಜನಿಕ ಸಂಸ್ಥೆ, ಬ್ಯಾಂಕ್‌ಗಳ ಸೋಗಿನಲ್ಲಿ ಜನರಿಗೆ ಸಂದೇಶಗಳು ಬರಬಹುದು.

ನಕಲಿ ಖಾತೆಗಳು ಬಳಕೆದಾರರನ್ನು ದಾರಿ ತಪ್ಪಿಸುವ ಮೂಲಕ ವಂಚಿಸಬಹುದು.

ಖ್ಯಾತ ವ್ಯಕ್ತಿಗಳಿಗೆ ಪ್ರತ್ಯೇಕ ʼಯೂಸರ್‌ ನೇಮ್‌' ಕೊಡಲು ಮೆಟಾ ಸಂಸ್ಥೆಗೆ ಸಾಧ್ಯವೇ?

ʼಯೂಸರ್‌ ನೇಮ್‌' ನಕಲಿ ಎಂದಾದ ಬಳಿಕ ಅದನ್ನು ಮೇಟಾ ಸಂಸ್ಥೆ ರದ್ದು ಮಾಡುತ್ತದೆಯೇ?

ʼಯೂಸರ್‌ ನೇಮ್‌' ವೈಶಿಷ್ಟ್ಯದ ಬಗ್ಗೆ ವಿವರ ವಾದ ಮಾಹಿತಿಯನ್ನು ಸರಕಾರಕ್ಕೆ ಒದಗಿಸಬೇಕು.

ವಾಟ್ಸಾಪ್‌ನ ಪ್ರತಿವಾದವೇನು?

ವಾಟ್ಸಾಪ್‌ನಲ್ಲಿ ʼಯೂಸರ್‌ ನೇಮ್‌' ವೈಶಿಷ್ಟ್ಯವು ಕಡ್ಡಾಯವಲ್ಲ, ಅದೊಂದು ಆಯ್ಕೆಯಾಗಿರಲಿದೆ.

ವಾಟ್ಸಾಪ್‌ನಲ್ಲಿ ರಚಿಸಿದ "ಯೂಸರ್‌ ನೇಮ್‌'ಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹುಡುಕಲು ಸಾಧ್ಯವಿಲ್ಲ.

ಒಂದು ಮೊಬೈಲ್‌ ಸಂಖ್ಯೆಯಿಂದ ಕೇವಲ 1 ʼಯೂಸರ್‌ ನೇಮ್‌' ಮಾತ್ರ ಸೃಷ್ಟಿಸಬಹುದು.

ಪ್ರತಿಯೊಂದು ಯೂಸರ್‌ ನೇಮ್‌ ವಿಶಿಷ್ಟವಾಗಿರು ವುದರಿಂದ ಅದನ್ನು ನಕಲು ಮಾಡಲು ಸಾಧ್ಯವಿಲ್ಲ.

ವಾಟ್ಸಾಪ್‌ ಕಳುಹಿಸುವ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ಗೆ ಒಳಪಟ್ಟಿರುತ್ತವೆ.

ವಾಟ್ಸಾಪ್‌ ಗುಂಪುಗಳಲ್ಲಿ ಫೋನ್‌ ಸಂಖ್ಯೆ ಗೌಪ್ಯತೆ ಯನ್ನು ಹೆಚ್ಚು ಮಾಡುವುದಷ್ಟೇ ನಮ್ಮ ಗುರಿ.

ಹೊಸ ವೈಶಿಷ್ಟ್ಯ ಕುರಿತಂತೆ ಸರಕಾರ ನೀಡುವ ಸೂಚನೆ ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ.


ವಾಟ್ಸಾಪ್‌, ಸಿಗ್ನಲ್‌, ಟೆಲಿಗ್ರಾಂಗೂ ನೋಟಿಸ್‌ ಜಾರಿ ಮಾಡಿದ ಸರಕಾರ

ʼಯೂಸರ್‌ ನೇಮ್‌' ಬಳಕೆಯನ್ನು ಆರಂಭಿಸುವುದಾಗಿ ವಾಟ್ಸಾಪ್‌ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರಕಾರವು ವಾಟ್ಸಾಪ್‌ನ ಮಾತೃಸಂಸ್ಥೆ ಮೆಟಾಕ್ಕೆ ನೋಟಿಸ್‌ ನೀಡಿದ್ದು, ತತ್‌ಕ್ಷಣವೇ ಈ ಪಕ್ರಿಯೆಯನ್ನು ನಿಲ್ಲಿಸಬೇಕು. ಅಲ್ಲದೇ 3 ದಿನಗಳೊಳಗೆ ಆನ್‌ಲೈನ್‌ ವಂಚನೆ ತಡೆಯುವುದಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದೆ. ಇದರ ಜತೆಗೆ ಭಾರತದಲ್ಲಿ ಈಗಾಗಲೇ ʼಯೂಸರ್‌ ನೇಮ್‌' ವೈಶಿಷ್ಟ್ಯವನ್ನು ಪರಿಚಯಿಸಿರುವ ಟೆಲಿಗ್ರಾಮ್‌, ಸಿಗ್ನಲ್‌ ಆಯಪ್‌‍ಗಳಿಗೂ ಕೇಂದ್ರ ಸರಕಾರ ನೋಟಿಸ್‌ ಜಾರಿ ಮಾಡಿದೆ. ನಕಲಿ ಖಾತೆಗಳ ಸೃಷ್ಟಿ, ವಂಚನೆಯನ್ನು ಹೇಗೆ ತಡೆಯಲಾಗುತ್ತಿದೆ? "ಯೂಸರ್‌ ನೇಮ್‌'ಗಳನ್ನು ಹೇಗೆ ಪರಿಶೀಲನೆ ನಡೆಸಲಾಗುತ್ತಿದೆ? ಹಣಕಾಸಿನ ವಂಚನೆಗಳನ್ನು ಹೇಗೆ ತಡೆಯಲಾಗುತ್ತಿದೆ? ಎಂಬುದರ ಬಗ್ಗೆ ವಿವರ ನೀಡುವಂತೆ ಸೂಚಿಸಿದೆ.

ಪ್ರಮುಖ ವ್ಯಕ್ತಿ, ಸಂಸ್ಥೆಗಳನ್ನು ಗುರುತಿಸಲು ವಾಟ್ಸಾಪ್‌ಗೆ ಸಾಧ್ಯವೇ?

ಪ್ರಮುಖ ವ್ಯಕ್ತಿಗಳು, ಬ್ಯಾಂಕ್‌ಗಳು, ಸರಕಾರಿ ಸಂಸ್ಥೆಗಳ 'ಯೂಸರ್‌ ನೇಮ್‌'ಗಳನ್ನು ಇತರರು ಬಳಸದಂತೆ ಮಾಡುವ ಅವಕಾಶ ವಾಟ್ಸಾಪ್‌ಗಿದೆ. ವಾಟ್ಸಾಪ್‌ನ ಮಾತೃಸಂಸ್ಥೆಯಾದ ಮೆಟಾ ತನ್ನ ಇತರ ಆಯಪ್‌ಗ್ಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಈಗಾಗಲೇ ಇಂತಹ ಗುರುತಿಸುವಿಕೆಯನ್ನು ಮಾಡುತ್ತಿದೆ.

ಆದರೆ ವಾಟ್ಸಾಪ್‌ನ ಮಾಹಿತಿಯನ್ನು ಮೆಟಾದ ಇತರ ಆಯಪ್‌ಗಳ ಜತೆ ಹಂಚುವುದಕ್ಕೆ ಸರಕಾರದ ವಿರೋಧವಿದೆ. ಅಲ್ಲದೇ ಭಾರತದಲ್ಲಿ ಜಾರಿಯಾಗಿರುವ ಗೋಪ್ಯತಾ ಕಾನೂನು ಇದಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಇದಕ್ಕೆ ಅವಕಾಶ ದೊರೆತರೆ ಇತರ ಆಯಪ್‌ಗ್ಳಂತೆ ವಾಟ್ಸಾಪ್‌ನಲ್ಲೂ ಮೆಟಾದಿಂದ ವೆರಿಫಿಕೇಶನ್‌ ಬ್ಯಾಡ್ಜ್ ಗಳು ದೊರೆಯುತ್ತವೆ.

-ಗಣೇಶ್‌ ಪ್ರಸಾದ್‌

Dailyhunt
Disclaimer: This content has not been generated, created or edited by Dailyhunt. Publisher: Udayavani