ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ವೈಫಲ್ಯದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.
"ಯಾರಪ್ಪನ ಮನೆಯಿಂದ ಹಣ ತಂದು ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ?" ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರಾಜ್ಯದ ಜನ ಸಾಮಾನ್ಯರ ಮೇಲೆ ಮೇಲಿಂದ ಮೇಲೆ ತೆರಿಗೆ ಹೇರಿ ಅದೇ ಹಣವನ್ನು ಗ್ಯಾರಂಟಿ ರೂಪದಲ್ಲಿ ನೀಡಲಾಗುತ್ತಿದೆ ಎಂದರು. ಗ್ಯಾರಂಟಿ ಕೊಡುವುದಕ್ಕೆ ನಮ್ಮ ತಕರಾರಿಲ್ಲ, ಆದರೆ ಜನರ ಜೇಬಿಗೆ ಕತ್ತರಿ ಹಾಕಿ ಕೊಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ತಲಾ ಆದಾಯ ಎರಡನೇ ಸ್ಥಾನದಲ್ಲಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸಂಪತ್ತು ಭರಿತವಾಗಿದೆ ಎಂದರೆ ಜನ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರ್ಥ. ಜನರೇ ಶ್ರೀಮಂತರಾಗಿದ್ದರೆ ಇನ್ನು ಈ ಗ್ಯಾರಂಟಿಗಳ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿಗರಿಗೆ 'ಅಭಿವೃದ್ಧಿ' ಎಂಬ ಪದದ ಅರ್ಥವೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿದ ಅವರು, "ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೆ. ಆಗ ನಾನು ಅಭಿವೃದ್ಧಿ ಮಾಡಲು ಹಣವಿಲ್ಲ ಎಂದು ಕಾಂಗ್ರೆಸ್‌ನವರಂತೆ ಕೈಚೆಲ್ಲಲಿಲ್ಲ. ಸಾಲಮನ್ನಾದ ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದೆ. ಆದರೆ ಈ ಸರ್ಕಾರ ಅಭಿವೃದ್ಧಿಯನ್ನೇ ಮರೆತಿದೆ," ಎಂದು ಕಿಡಿಕಾರಿದರು.
ಶಾಸಕರು ಐಪಿಎಲ್ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವ ವಿಚಾರದ ಬಗ್ಗೆ ಮಾತನಾಡುತ್ತಾ, "ಡಿಸಿಎಂನಿಂದ ಹಿಡಿದು ಸರ್ಕಾರದವರೆಗೆ ಎಲ್ಲರೂ ಈ ವಿಚಾರದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಹಿಂದೆ ಶಾಸಕರ ಭವನಕ್ಕೆ ಬಂದು ಪಾಸ್ ಕೊಡುತ್ತಿದ್ದರು. ಆದರೆ ಈಗ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದೆಯಾ?" ಎಂದು ತರಾಟೆಗೆ ತೆಗೆದುಕೊಂಡರು.

