ಲಂಡನ್: ಯುರೋಪ್‌ನಲ್ಲಿ ಮತ್ತೊಂದು ಸುತ್ತಿನ ಉಷ್ಣಗಾಳಿ ಹೆಚ್ಚಾಗಿದ್ದು, ಕೆಲವು ಭಾಗಗಳಲ್ಲಿ ತೀವ್ರ ತಾಪಮಾನ ಮುಂದುವರಿದಿದೆ. ಈ ಅಸಾಧಾರಣ ಬೇಸಿಗೆಯಿಂದ ಬ್ರಿಟನ್‌ಲ್ಲಿಯೂ ತಾಪ ವಿಪರೀತ ಏರಿಕೆ ಕಂಡಿದೆ.
ಮಧ್ಯ ಮತ್ತು ಆಗ್ನೇಯ ಇಂಗ್ಲೆಂಡ್‌ನಲ್ಲಿ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಇದು 2003ರಲ್ಲಿ ದಾಖಲಾದ 38.5 ಡಿಗ್ರಿ ಸೆಲ್ಸಿಯಸ್ ದಾಖಲೆಗೆ ಸಮೀಪವಿದೆ. ಕಳೆದ ವರ್ಷವೂ ಇದೇ ರೀತಿ ತಾಪಮಾನ ದಾಖಲಾಗಿತ್ತು.
ತಾಪಮಾನ ವಿಪರೀತ ಏರಿಕೆ ನಡುವೆ ದಕ್ಷಿಣ ಇಂಗ್ಲೆಂಡ್‌ನ 'ನ್ಯೂ ಫಾರೆಸ್ಟ್' ಸೇರಿದಂತೆ ದೇಶಾದ್ಯಂತ ಕಾಡ್ಗಿಚ್ಚು ಅನಿಯಂತ್ರಿತವಾಗಿ ಏರಿಕೆ ಕಂಡಿದೆ. ರಾಷ್ಟ್ರೀಯ ಅಗ್ನಿಶಾಮಕ ಮಂಡಳಿಯ ಪ್ರಕಾರ, ಈ ವರ್ಷ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 1,017 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ.
ವಿದ್ಯುತ್ ಸ್ಥಾವರ ಸ್ಥಗಿತ: ರೊಮೇನಿಯಾದ ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಬದಲಿಗೆ ಪವನ ವಿದ್ಯುತ್ ಉತ್ಪಾದನೆ ಕಡೆ ಹೆಚ್ಚು ಹೊತ್ತು ನೀಡಲಾಗಿದೆ ಎಂದು ಹೇಳಿದೆ.

