ಚಂಡಿಗಢ, ಜು. 5: ಸಿಖ್ ಧಾರ್ಮಿಕ ಸಂಸ್ಥೆಗಳ ಹೆಸರು ಕೆಡಿಸಲು ಸಂಘಟಿತ ಆನ್‌ಲೈನ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅಕಾಲ್ ತಖ್ತ್ ಜತೇದರ್ ಗಿಯಾನಿ ಕುಲದೀಪ್ ಸಿಂಗ್ ಗರ್ಗಜ್, ಇದನ್ನು ನಿಲ್ಲಿಸಲು ಭಗವಂತ್ ಮಾನ್ ನೇತೃತ್ವದ ಸರಕಾರಕ್ಕೆ 10 ದಿನಗಳ ಗಡುವು ನೀಡಿದ್ದಾರೆ.
ಇದರೊಂದಿಗೆ ಅಕಾಲ ತಖ್ತ್ ಮತ್ತು ಪಂಜಾಬ್ ಸರಕಾರದ ನಡುವಿನ ಸಂಘರ್ಷ ರವಿವಾರ ಮತ್ತಷ್ಟು ತಾರಕಕ್ಕೇರಿದೆ.
ಅಮೃತಸರದ ಸ್ವರ್ಣ ಮಂದಿರದಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆಯೋಜಿಸಿದ್ದ ಪಂಥಿಕ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೊಹಾಲಿ ಮತ್ತು ಚಂಡೀಗಢ ಮೂಲದ ಸಾಮಾಜಿಕ ಜಾಲ ತಾಣ ಕೇಂದ್ರಗಳು ಆಕ್ಷೇಪಾರ್ಹ ಆನ್‌ಲೈನ್ ವಿಷಯಗಳ ಮೂಲಕ ಶ್ರೀ ಅಕಾಲ ತಖ್ತ್ ಸಾಹಿಬ್ ಮತ್ತು ಇತರ ಸಿಖ್ ಸಂಸ್ಥೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದರು.
ದಿಲ್ಲಿಯ ಕೆಲವು ವ್ಯಕ್ತಿಗಳು ಸೇರಿದಂತೆ ಈ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿರುವ ಕೆಲವರು ಸಿಖ್ ಧಾರ್ಮಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಂತಹ ವಿಷಯಗಳನ್ನು ಹರಡಲು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜತೇದಾರ್ ಪ್ರತಿಪಾದಿಸಿದ್ದಾರೆ.
ಆದರೆ, ಈ ಆರೋಪಗಳನ್ನು ಸಾಬೀತುಪಡಿಸಲು ಅವರು ಯಾವುದೇ ಪುರಾವೆಗಳನ್ನು ಬಹಿರಂಗಪಡಿಸಲಿಲ್ಲ.

