Dailyhunt Logo
  • Light mode
    Follow system
    Dark mode
    • Play Story
    • App Story
2000 ರೂ. ಮೇಲಿನ UPI ಪಾವತಿಗೆ ವ್ಯಾಪಾರಿ ಶುಲ್ಕ?

2000 ರೂ. ಮೇಲಿನ UPI ಪಾವತಿಗೆ ವ್ಯಾಪಾರಿ ಶುಲ್ಕ?

ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಯ ಪ್ರಸ್ತಾಪಿತ ತಿದ್ದುಪಡಿಯು UPI ವಹಿವಾಟುಗಳ ಮೇಲೆ ಸ್ವಯಂಚಾಲಿತವಾಗಿ ಶುಲ್ಕಗಳನ್ನು ವಿಧಿಸುವುದಿಲ್ಲ. ಆದರೆ ಶುಲ್ಕ ವಿಧಿಸಲಾಗದ ಕಾನೂನು ನಿಷೇಧವನ್ನು ತೆಗೆದು ಹಾಕುತ್ತದೆ.

ಉದ್ಯಮ ಮತ್ತು ನಿಯಂತ್ರಕ ಮೂಲಗಳನ್ನು ಉಲ್ಲೇಖಿಸಿ Reuters ವರದಿ ಮಾಡಿರುವ ಪ್ರಕಾರ 2000 ರೂ.ಗಿಂತ ಹೆಚ್ಚಿನ ಮೊತ್ತದ ಏಕೀಕೃತ ಯುನಿಫೈಡ್ ಪೇಯ್ಮೆಂಟ್ ಇಂಟರ್ಫೇಸ್ (UPI) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರವು ವ್ಯಾಪಾರಿ ಶುಲ್ಕಗಳನ್ನು ಪರಿಚಯಿಸುವ ಸಾಧ್ಯತೆಯಿದೆ.

ವಾರ್ಷಿಕ 1.5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯವಹಾರಗಳಿಗೆ 2000 ರೂ. ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ 0.3-0.5% ವ್ಯಾಪಾರಿ ರಿಯಾಯಿತಿ ದರ (MDR) ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) UPI ವರ್ಗಾವಣೆಗಳು ಉಚಿತವಾಗಿ ಮುಂದುವರಿಯಲಿವೆ.

ಈ ಪ್ರಸ್ತಾಪವು ಆಗಸ್ಟ್ 5ರಂದು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಯ ಭಾಗವಾಗಿದೆ.

ವರದಿಗಳ ಪ್ರಕಾರ ಮಸೂದೆಯು ಪೇಯ್ಮೆಂಟ್ ಮತ್ತು ಸೆಟಲ್ಮೆಂಟ್ ಸಿಸ್ಟಂ ಕಾಯ್ದೆ, 2007ಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಈ ತಿದ್ದುಪಡಿ ಬ್ಯಾಂಕುಗಳು ಅಥವಾ ಪಾವತಿ ವ್ಯವಸ್ಥೆ ಪೂರೈಕೆದಾರರು ಶುಲ್ಕ ವಿಧಿಸಲಾಗದ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು ನೋಟಿಫೈ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಅಂದರೆ ಯಾವ ಪಾವತಿ ವಿಧಾನಗಳು ಉಚಿತ ಮತ್ತು ಯಾವುದಕ್ಕೆ MDR ವಿಧಿಸಬಹುದು ಎಂಬುದನ್ನು ಸೂಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಗಲಿದೆ.

ಈ ಮಸೂದೆಯು MDR ವಿಧಿಸುವ ಕಾನೂನು ಅಧಿಕಾರವನ್ನು ಮಾತ್ರ ಉಲ್ಲೇಖಿಸಿದೆ. ಶುಲ್ಕದ ಪ್ರಮಾಣವನ್ನು ಅಥವಾ ಅದು ಅನ್ವಯಿಸುವ ವಹಿವಾಟುಗಳ ವರ್ಗಗಳನ್ನು ವಿವರಿಸುವುದಿಲ್ಲ.

ಎರಡು ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ. ಮೊದಲನೆಯದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಪಾವತಿಗಳಿಗೆ MDR ವಿಧಿಸುವುದು. ಎರಡನೆಯದು ವ್ಯಾಪಾರಿಯ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಶುಲ್ಕ ವಿಧಿಸುವುದಾಗಿದೆ. ಅಂದರೆ, ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಶುಲ್ಕಗಳು ಅನ್ವಯಿಸುತ್ತವೆ. ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಉಚಿತ UPI ಪಾವತಿ ಇರಿಸಲಾಗಿದೆ.

ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆಯ ಪ್ರಸ್ತಾಪಿತ ತಿದ್ದುಪಡಿಯು UPI ವಹಿವಾಟುಗಳ ಮೇಲೆ ಸ್ವಯಂಚಾಲಿತವಾಗಿ ಶುಲ್ಕಗಳನ್ನು ವಿಧಿಸುವುದಿಲ್ಲ. ಆದರೆ ಶುಲ್ಕ ವಿಧಿಸಲಾಗದ ಕಾನೂನು ನಿಷೇಧವನ್ನು ತೆಗೆದು ಹಾಕುತ್ತದೆ. ನಂತರದ ಹಂತದಲ್ಲಿ ನಿರ್ದಿಷ್ಟ ಡಿಜಿಟಲ್ ಪಾವತಿ ವಿಧಾನಗಳಿಗೆ MDR ನಿರ್ಧರಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi