ಹೊಸದಿಲ್ಲಿ: ಫೆಬ್ರವರಿ 2020ರ ಈಶಾನ್ಯ ದಿಲ್ಲಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಅಡಿಯಲ್ಲಿ ಜೈಲು ಪಾಲಾಗಿರುವ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಶುಕ್ರವಾರ ನಗರ ಪೊಲೀಸರ ಅಭಿಪ್ರಾಯವನ್ನು ಕೇಳಿ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ವಿಕಾಸ್ ಮಹಾಜನ್ ಅವರಿದ್ದ ಪೀಠವು, ಎರಡು ವಾರಗಳ ಒಳಗೆ ಸೂಕ್ತ ಉತ್ತರ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದೆ.
ಖಾಲಿದ್ ಪರ ವಕೀಲರು, ಬಂಧನದ ನಂತರ ಇದು ಖಾಲಿದ್ ರ ಮೂರನೇ ಜಾಮೀನು ಅರ್ಜಿಯಾಗಿದೆ ಮತ್ತು ಅವರು ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನೂ ಕೋರುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಈ ಬಗ್ಗೆ ಉತ್ತರಿಸಿದ ಪೀಠ, ಇನ್ನೋರ್ವ ಆರೋಪಿ ಶಾರ್ಜಿಲ್ ಇಮಾಮ್ ಅವರ ಜಾಮೀನು ಅರ್ಜಿಯೂ ಆಗಸ್ಟ್ 27 ರಂದು ವಿಚಾರಣೆಗೆ ಬರಲಿರುವುದರಿಂದ ಅದರ ಜೊತೆಯಲ್ಲಿಯೇ ಖಾಲಿದ್ ಅವರ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಹೇಳಿದೆ.
ತಮ್ಮ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಜುಲೈ 4 ರ ನಿರ್ಧಾರವನ್ನು ಪ್ರಶ್ನಿಸಿ ಖಾಲಿದ್ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ದಿಲ್ಲಿ ಪೋಲೀಸರಿಗೆ ಈ ಸೂಚನೆಯನ್ನು ನೀಡಿದೆ.
ದಿಲ್ಲಿ ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಸದರಿ ವಿಚಾರಣಾ ನ್ಯಾಯಾಲಯವು ಇಮಾಮ್ ಅವರ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿತ್ತು. ಹಾಗಾಗಿ ಎರಡೂ ಪ್ರಕರಣಗಳನ್ನು ಪೀಠವು ಒಟ್ಟಿಗೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದರು.
53 ಜನರು ಪ್ರಾಣ ಕಳೆದುಕೊಂಡು 700 ಕ್ಕೂ ಹೆಚ್ಚು ಜನರು ಗಾಯಗೊಂಡ ಫೆಬ್ರವರಿ 2020 ರ ಗಲಭೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು ಎಂಬ ಆರೋಪದ ಮೇಲೆ ಯುಎಪಿಎ ಕಾಯ್ದೆ ಅಡಿಯಲ್ಲಿ ಉಮರ್ ಖಾಲಿದ್ ರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು. ಸಿಎಎ 2019 ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ಸಮಯದಲ್ಲಿ ಈ ಹಿಂಸಾಚಾರ ಭುಗಿಲೆದ್ದಿತ್ತು.
ಶಾರ್ಜಿಲ್ ಇಮಾಮ್, ಖಾಲಿದ್ ಸೈಫಿ ಮತ್ತು ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇತರರ ವಿರುದ್ಧವೂ ದಿಲ್ಲಿ ಪೊಲೀಸ್ ವಿಶೇಷ ವಿಭಾಗವು ತನಿಖೆ ನಡೆಸುತ್ತಿದೆ.
ಸುಪ್ರೀಂ ಕೋರ್ಟ್ ನ ಜನವರಿ 5 ರಂದು ನೀಡಿದ ಆದೇಶ ಪಾಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಜುಲೈ 4 ರಂದು ತಿರಸ್ಕರಿಸಿತ್ತು. ಆದ್ದರಿಂದ, ಅರ್ಜಿಯನ್ನು ಪರಿಗಣಿಸಲು ಅಥವಾ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಈ ಮೊದಲು , ಸೆಪ್ಟೆಂಬರ್ 2, 2025 ರಂದು ಹೈಕೋರ್ಟ್ ವಿಭಾಗೀಯ ಪೀಠವು ಉಮರ್ ಖಾಲಿದ್ ಗೆ ಜಾಮೀನು ನಿರಾಕರಿಸಿತ್ತು. ಜನವರಿ 5 ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿತ್ತು. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠವು ತನ್ನ ಆದೇಶದಲ್ಲಿ , "ನ್ಯಾಯಾಲಯವು ಯುಎಪಿಎ ಅಡಿಯಲ್ಲಿ ಖಾಲಿದ್ ಮತ್ತು ಇಮಾಮ್ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ಸಾಬೀತಾಗಿದೆ ಎಂದು ಗಮನಿಸಿದೆ ಮತ್ತು ಪಾಲ್ಗೊಳ್ಳುವಿಕೆಯ ಶ್ರೇಣೀಕರಣವನ್ನು ಪರಿಗಣಿಸಿ ಎಲ್ಲಾ ಆರೋಪಿಗಳನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ "ಎಂದು ತನ್ನ ಆದೇಶದಲ್ಲಿ ಹೇಳಿತ್ತು.

