Dailyhunt Logo
  • Light mode
    Follow system
    Dark mode
    • Play Story
    • App Story
2026-27ರಲ್ಲಿ ಖಾಸಗಿ ನಿರ್ವಹಣೆಗೆ 17 ರಾಷ್ಟ್ರೀಯ ಹೆದ್ದಾರಿಗಳ ಆಯ್ಕೆ

2026-27ರಲ್ಲಿ ಖಾಸಗಿ ನಿರ್ವಹಣೆಗೆ 17 ರಾಷ್ಟ್ರೀಯ ಹೆದ್ದಾರಿಗಳ ಆಯ್ಕೆ

ಹೊಸದಿಲ್ಲಿ, ಮೇ 28: 2026-27ನೇ ಹಣಕಾಸು ಸಾಲಿನಲ್ಲಿ ಖಾಸಗಿ ನಿರ್ವಹಣೆ ಪ್ರಕ್ರಿಯೆಗೆ ಒಳಪಡಿಸಲು ದೇಶದ ವಿವಿಧ ಭಾಗಗಳ 17 ರಾಷ್ಟ್ರೀಯ ಹೆದ್ದಾರಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗುರುವಾರ ಪ್ರಕಟಿಸಿದೆ.

ಟೋಲ್-ಆಪರೇಟ್-ಟ್ರಾನ್ಸ್‌ಫರ್ (TOT) ಹಾಗೂ ಮೂಲಸೌಕರ್ಯ ಹೂಡಿಕೆ ದತ್ತಿ ನಿಧಿ (InvIT) ಮಾದರಿಗಳ ಮೂಲಕ ಒಟ್ಟು 1,692.5 ಕಿಲೋಮೀಟರ್ ಉದ್ದದ ಹೆದ್ದಾರಿಗಳನ್ನು ಖಾಸಗಿ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ.

ಹರ್ಯಾಣ, ಜಾರ್ಖಂಡ್, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ವ್ಯಾಪಿಸಿರುವ ರಾಷ್ಟ್ರೀಯ ಹೆದ್ದಾರಿಗಳು ಈ ಪಟ್ಟಿಯಲ್ಲಿ ಸೇರಿವೆ.

ಆಯ್ಕೆಗೊಂಡಿರುವ ಕಾರಿಡಾರ್‌ ಗಳು ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವುದರ ಜೊತೆಗೆ ಆರ್ಥಿಕ ಚಟುವಟಿಕೆ ಮತ್ತು ಸರಕು ಸಾಗಣೆಯ ದೃಷ್ಟಿಯಿಂದ ಮಹತ್ವ ಪಡೆದಿವೆ ಎಂದು ಎನ್‌ಎಚ್‌ಎಐ ತಿಳಿಸಿದೆ.

ಖಾಸಗಿ ನಿರ್ವಹಣೆ ಪ್ರಕ್ರಿಯೆಯನ್ನು TOT ಮತ್ತು InvIT ಚೌಕಟ್ಟಿನಡಿ ಪಾರದರ್ಶಕ ಹಾಗೂ ಸಂಯೋಜಿತ ರೀತಿಯಲ್ಲಿ ಜಾರಿಗೆ ತರಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಈ ಮಾದರಿಗಳ ಮೂಲಕ ಹೆದ್ದಾರಿ ಅಭಿವೃದ್ಧಿಗೆ ದೀರ್ಘಕಾಲೀನ ಸಾಂಸ್ಥಿಕ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಲಿದ್ದು, ರಾಷ್ಟ್ರೀಯ ಹೆದ್ದಾರಿಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನೂ ಖಾತರಿಪಡಿಸಲಾಗುತ್ತದೆ ಎಂದು NHAI ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi