Dailyhunt Logo
  • Light mode
    Follow system
    Dark mode
    • Play Story
    • App Story
30 ದಿನಗಳಲ್ಲಿ ಹಾರ್ಮುಝ್‌ ಸಂಚಾರ ಯುದ್ಧ ಪೂರ್ವ ಸ್ಥಿತಿಗೆ ಮರಳುತ್ತದೆ: ಇರಾನ್

30 ದಿನಗಳಲ್ಲಿ ಹಾರ್ಮುಝ್‌ ಸಂಚಾರ ಯುದ್ಧ ಪೂರ್ವ ಸ್ಥಿತಿಗೆ ಮರಳುತ್ತದೆ: ಇರಾನ್

ಟೆಹರಾನ್, ಮೇ 24: ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲು ಹತ್ತಿರವಾಗಿವೆ ಎಂದು ವರದಿಯಾಗಿರುವಂತೆಯೇ, ಹಾರ್ಮುಝ್‌ ಜಲಸಂಧಿಯಲ್ಲಿ ಸಂಚಾರ 30 ದಿನಗಳೊಳಗೆ ಯುದ್ಧಪೂರ್ವ ಸ್ಥಿತಿಗೆ ಮರಳುತ್ತದೆ ಎಂದು ಇರಾನ್ ರವಿವಾರ ಹೇಳಿದೆ.

ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದ ಬಳಿಕ ಇರಾನ್ ಹಾರ್ಮುಝ್‌ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್‍ನ ಬಂದರುಗಳ ವಿರುದ್ಧ ದಿಗ್ಬಂಧನ ವಿಧಿಸಿದೆ. ಇದರಿಂದ ಕಚ್ಛಾತೈಲದ ಬೆಲೆ ಗಗನಕ್ಕೇರಿದೆ. ಆದರೆ ಇದೀಗ ಯುದ್ಧವನ್ನು ಕೊನೆಗೊಳಿಸುವ, ಹಾರ್ಮುಝ್‌ ಜಲಸಂಧಿಯನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಚೌಕಟ್ಟನ್ನು ರಚಿಸುವ ಬಗ್ಗೆ ಎರಡೂ ದೇಶಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆಕ್ಸಿಯೋಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ವರದಿಯ ಪ್ರಕಾರ, 60 ದಿನಗಳವರೆಗೆ ಕದನ ವಿರಾಮ ವಿಸ್ತರಣೆ, ಈ ಸಂದರ್ಭದಲ್ಲಿ ಅಮೆರಿಕದ ನೌಕಾ ದಿಗ್ಬಂಧನ ತೆರವು, ಹಾರ್ಮುಝ್‌ ಜಲಸಂಧಿಯನ್ನು ಮತ್ತೆ ತೆರೆಯುವ ಅಂಶಗಳನ್ನು ಪ್ರಸ್ತಾವಿತ ಚೌಕಟ್ಟು ಹೊಂದಿದೆ. ಎರಡೂ ಕಡೆಯ ನಡುವಿನ ಸಂಭಾವ್ಯ ಒಪ್ಪಂದವು 30 ದಿನಗಳೊಳಗೆ ಹಾರ್ಮುಝ್‌ ಜಲಸಂಧಿಯಲ್ಲಿನ ಹಡಗು ಸಂಚಾರವನ್ನು ಯುದ್ಧಪೂರ್ವ ಮಟ್ಟಕ್ಕೆ ತಲುಪಿಸುತ್ತದೆ ಎಂದು ಇರಾನ್‍ನ ತಸ್ನೀಮ್ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

ಸಂಭಾವ್ಯ ಒಪ್ಪಂದದ ಪ್ರಥಮ ಹಂತದಲ್ಲಿ ಅಮೆರಿಕದ ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಮತ್ತು ಸ್ಥಂಭನಗೊಳಿಸಿರುವ ಇರಾನ್‍ನ ಸ್ವತ್ತುಗಳನ್ನು ಬಿಡುಗಡೆಗೊಳಿಸಬೇಕು ಎಂದು ಇರಾನ್ ಆಗ್ರಹಿಸಿದೆ. ಆದರೆ ಪರಮಾಣು ವಿಷಯ ಸೇರಿದಂತೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ ಎಂದು ವರದಿ ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi