Dailyhunt
ಆರು ವರ್ಷಗಳಲ್ಲಿ ಭಾರತದ ಐದು ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತು ಶೇ.400ರಷ್ಟು ಏರಿಕೆ: ಅಧ್ಯಯನ ವರದಿ

ಆರು ವರ್ಷಗಳಲ್ಲಿ ಭಾರತದ ಐದು ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತು ಶೇ.400ರಷ್ಟು ಏರಿಕೆ: ಅಧ್ಯಯನ ವರದಿ

ಹೊಸದಿಲ್ಲಿ: 2019 ಮತ್ತು 2025ರ ನಡುವೆ ಭಾರತದ ಐದು ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತು ಶೇ.400ರಷ್ಟು ಏರಿಕೆಯಾಗಿದೆ ಎಂದು ಲಾಭೋದ್ದೇಶವಿಲ್ಲದ ಸಂಸ್ಥೆ ʼಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೇಬಿಲಿಟಿ ಆಯಂಡ್ ಟ್ಯಾಕ್ಸ್ ದಿ ಟಾಪ್ʼ ಅಭಿಯಾನವು ಬುಧವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯು ತಿಳಿಸಿದೆ.

'ವೆಲ್ತ್ ಟ್ರ್ಯಾಕರ್ ಇಂಡಿಯಾ 2026' ಶೀರ್ಷಿಕೆಯ ವರದಿಯು ದೇಶದ 1,688 ಅತಿ ಶ್ರೀಮಂತ ವ್ಯಕ್ತಿಗಳ (1,000 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವವರು) ಮೇಲೆ ಪ್ರಗತಿಪರ ಸಂಪತ್ತು ತೆರಿಗೆಯನ್ನು ವಿಧಿಸುವುದರಿಂದ ಕಲ್ಯಾಣ ಕಾರ್ಯಕ್ರಮಗಳಿಗಾಗಿ 10 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸಂಗ್ರಹಿಸಬಹುದು ಎಂದೂ ಹೇಳಿದೆ.

ಭಾರತದಲ್ಲಿ ವಸಾಹತುಶಾಹಿ ಯುಗಕ್ಕೆ ಹೋಲಿಸಬಹುದಾದ ಅಸಮಾನತೆಯಿದೆ. ದೇಶದಲ್ಲಿಯ ಶೇ.1ರಷ್ಟು ಅತ್ಯಂತ ಶ್ರೀಮಂತರು ಶೇ.40ರಷ್ಟು ರಾಷ್ಟ್ರೀಯ ಸಂಪತ್ತಿನ ಮೇಲೆ ನಿಯಂತ್ರಣ ಹೊಂದಿದ್ದಾರೆ ಎಂದು ವರದಿಯು ತಿಳಿಸಿದೆ.

ದೇಶದಲ್ಲಿಯ ಅತ್ಯಂತ ಶ್ರೀಮಂತರ ಒಟ್ಟು ಸಂಪತ್ತು 166 ಲಕ್ಷ ಕೋಟಿ ರೂ.ಗಳನ್ನು ಮೀರಿದ್ದು, ಇದು ಭಾರತದ ಜಿಡಿಪಿಯ ಸುಮಾರು ಶೇ.50ರಷ್ಟಿದೆ ಎಂದು ವರದಿಯು ಬೆಟ್ಟು ಮಾಡಿದೆ.

1,000 ಕೋಟಿ ರೂ.ಗೂ ಹೆಚ್ಚಿನ ಸಂಪತ್ತು ಹೊಂದಿರುವ 1,688 ಅತ್ಯಂತ ಶ್ರೀಮಂತ ಕುಟುಂಬಗಳ ಮೇಲೆ ಶೇ.2ರಿಂದ ಶೇ.6ರಷ್ಟು ಪ್ರಗತಿಪರ ತೆರಿಗೆ ಮತ್ತು ಹೆಚ್ಚುವರಿಯಾಗಿ ಮೂರನೇ ಒಂದು ಭಾಗದಷ್ಟು ಉತ್ತರಾಧಿಕಾರ ತೆರಿಗೆಯನ್ನು ವಿಧಿಸುವುದರಿಂದ ದೇಶವು ವಾರ್ಷಿಕವಾಗಿ ಕಲ್ಯಾಣ ಯೋಜನೆಗಳಿಗೆ 10.6 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿರುವ ವರದಿಯು, ಆರೋಗ್ಯ ಮತ್ತು ಶಿಕ್ಷಣ ವೆಚ್ಚವನ್ನು ತಲಾ ಜಿಡಿಪಿಯ ಶೇ.1ರಷ್ಟು ಹೆಚ್ಚಿಸುವುದು ಮತ್ತು ವೃದ್ಧರಿಗೆ ಮಾಸಿಕ 12,000 ರೂ.ಗಳ ಪಿಂಚಣಿ ಒದಗಿಸುವುದು ಇದರ ಪ್ರಯೋಜನಗಳಲ್ಲಿ ಸೇರಬಹುದು ಎಂದು ಹೇಳಿದೆ.

2019 ಮತ್ತು 2025ರ ನಡುವೆ ಅಂಬಾನಿಯವರ ಸಂಪತ್ತು ಶೇ.153ರಷ್ಟು ಏರಿಕೆಯಾಗಿದೆ ಎಂದು ಹೇಳಿರುವ ವರದಿಯು, ಈ ಅವಧಿಯಲ್ಲಿ ಅವರಿಂದ ಶೇ.2ರಷ್ಟು ಸಂಪತ್ತು ತೆರಿಗೆಯನ್ನು ಸಂಗ್ರಹಿಸಿದ್ದರೆ ಮೂರು ವರ್ಷಗಳವರೆಗೆ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ಪೂರೈಸಬಹುದಿತ್ತು ಎಂದು ತಿಳಿಸಿದೆ.

ಇದೇ ಅವಧಿಯಲ್ಲಿ ಅದಾನಿಯವರ ಸಂಪತ್ತು ಶೇ.625ರಷ್ಟು ಏರಿಕೆಯಾಗಿದ್ದು, ಅವರಿಗೆ ಶೇ.2ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ ಇಡೀ ದೇಶದಲ್ಲಿ ಎರಡು ವರ್ಷಗಳ ಕಾಲ ಪ್ರಾಥಮಿಕ ಆರೋಗ್ಯ ಸೇವೆಗೆ ಹಣಕಾಸು ಒದಗಿಸಬಹುದು ಮತ್ತು ವಾಯುಮಾಲಿನ್ಯದಿಂದ ತೀವ್ರ ಪೀಡಿತ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ಉಚಿತ ವಾಯು ಶುದ್ಧೀಕರಣ ಯಂತ್ರಗಳನ್ನು ಸಹ ಪೂರೈಸಬಹುದು ಎಂದು ಹೇಳಿದೆ.

ಅಧ್ಯಯನವು ಕಲ್ಯಾಣ ಕಾರ್ಯಕ್ರಮಕ್ಕಾಗಿ ತನ್ನ ಹೂಡಿಕೆಗಳನ್ನು ಹೆಚ್ಚಿಸಲು ಸಂಪನ್ಮೂಲಗಳು ಲಭ್ಯವಿಲ್ಲ ಎಂಬ ಸರಕಾರದ ಹೇಳಿಕೆಯ ಪೊಳ್ಳುತನವನ್ನು ಬಯಲಿಗೆಳೆದಿದೆ. ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿಧಿಸುತ್ತದೆಯಾದರೂ ಇಂದು ಕಷ್ಟಪಟ್ಟು ದುಡಿಯುವ ವ್ಯಕ್ತಿಗಳು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗಿಂತ ಹೆಚ್ಚು ತೆರಿಗೆಯನ್ನುಪಾವತಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಸರಕಾರವು ಕಳೆದ 11 ವರ್ಷಗಳಲ್ಲಿ 19.6 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿರುವುದನ್ನೂ ವರದಿಯು ಬೆಟ್ಟು ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi