Dailyhunt Logo
  • Light mode
    Follow system
    Dark mode
    • Play Story
    • App Story
ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ? ಬೇಡವೇ?

ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ? ಬೇಡವೇ?

ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ? ಬೇಡವೇ?

ದಿಲ್ಲಿ ಮೂಲದ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ ಪ್ರಕಾರ, ಕೋಳಿ ಮಾಂಸವನ್ನು ಸಿಂಕ್ ನಲ್ಲಿ ತೊಳೆಯುವ ಅಭ್ಯಾಸದಿಂದ ನಿಮ್ಮ ಅಡುಗೆಮನೆಯ ಕೌಂಟರ್ ಗಳು, ಪಾತ್ರೆಗಳು ಮತ್ತು ಸುತ್ತಮುತ್ತಲಿನ ಆಹಾರ ಕಲುಷಿತವಾಗಬಹುದು.

ಮನೆಗೆ ತಂದ ಕೋಳಿ ಮಾಂಸವನ್ನು ನಲ್ಲಿಯ ನೀರಿನಡಿ ತೊಳೆಯುವುದು ಸಾಮಾನ್ಯ ಭಾರತೀಯ ಮನೆಗಳಲ್ಲಿ ಕಂಡುಬರುವ ಅಭ್ಯಾಸವಾಗಿದೆ. ತಲೆಮಾರುಗಳಿಂದ ಅನೇಕರು ಅಡುಗೆ ಮಾಡುವ ಮೊದಲು ಹಸಿ ಕೋಳಿ ಮಾಂಸ ತೊಳೆಯುವುದು ನೈರ್ಮಲ್ಯಕ್ಕೆ ಅತ್ಯಗತ್ಯ ಎಂದು ತಿಳಿದಿದ್ದೇವೆ. ಆದರೆ ದಿಲ್ಲಿ ಮೂಲದ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ ಪ್ರಕಾರ, ಈ ಅಭ್ಯಾಸದಿಂದ ನಿಮ್ಮ ಅಡುಗೆಮನೆಯ ಕೌಂಟರ್ ಗಳು, ಪಾತ್ರೆಗಳು ಮತ್ತು ಸುತ್ತಮುತ್ತಲಿನ ಆಹಾರ ಕಲುಷಿತವಾಗಬಹುದು.

ಸೆಪ್ಟೆಂಬರ್ 30ರಂದು ಇನ್ಸ್ಟಾಗ್ರಾಮ್ ನಲ್ಲಿ ಡಾ. ಚೋಪ್ರಾ ಒಂದು ಎಚ್ಚರಿಕೆ ನೀಡಿದ್ದಾರೆ. "ಅಡುಗೆ ಮಾಡುವ ಮೊದಲು ಇನ್ನೂ ಹಸಿ ಕೋಳಿ ಮಾಂಸವನ್ನು ತೊಳೆಯುತ್ತಿದ್ದೀರಾ? ಹಾಗೆ ಮಾಡುವುದರಿಂದ ನಿಮ್ಮ ಅಡುಗೆಮನೆಯ ಸುರಕ್ಷತೆ ಕಡಿಮೆಯಾಗಬಹುದು. ತೊಳೆಯುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಅಡುಗೆಮನೆಯಾದ್ಯಂತ ಹರಡಬಹುದು. ಕೋಳಿ ಮಾಂಸವನ್ನು ಸುರಕ್ಷಿತವಾಗಿಸುವುದು ಅದನ್ನು ಸರಿಯಾಗಿ ಬೇಯಿಸುವುದು, ತೊಳೆದಿಡುವುದಲ್ಲ" ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, ಹಸಿ ಕೋಳಿ ಮಾಂಸವು ಸಾಲ್ಮೋನೆಲ್ಲಾ ಮತ್ತು ಕ್ಯಾಂಪೈಲೋಬ್ಯಾಕ್ಟರ್ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಹೀಗಾಗಿ ಅವರು ಹಸಿ ಮಾಂಸದಲ್ಲಿ ಜೈವಿಕ ಅಪಾಯವನ್ನು ಗುರುತಿಸಿದ್ದಾರೆ. "ನೀವು ಹಸಿ ಕೋಳಿ ಮಾಂಸವನ್ನು ಹರಿಯುವ ನಲ್ಲಿಯ ನೀರಿನ ಅಡಿಯಲ್ಲಿ ಇರಿಸಿದಾಗ, ವಾಸ್ತವದಲ್ಲಿ ಸೂಕ್ಷ್ಮಜೀವಿಗಳನ್ನು ತೊಳೆದು ಹಾಕುತ್ತಿರುವುದಿಲ್ಲ" ಎಂದು ಅಲೋಕ್ ಚೋಪ್ರಾ ಹೇಳಿದ್ದಾರೆ.

ಮಾನವನ ಕಣ್ಣಿಗೆ ನೀರು ಚರಂಡಿಗೆ ಹರಿಯುವುದು ಮಾತ್ರ ಕಂಡರೂ, ದ್ರವದ ಚಲನಶೀಲತೆಯ ವಿಜ್ಞಾನವು (fluid dynamics) ಸಂಪೂರ್ಣ ಭಿನ್ನವಾದ ವಿಷಯವನ್ನು ಹೇಳುತ್ತದೆ. ಮಾಂಸದ ನಯವಾದ ಮೇಲ್ಮೈಯಿಂದ ನೀರಿನ ಹನಿಗಳು ಚಿಮ್ಮಿ ಸೂಕ್ಷ್ಮವಾದ ಹನಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೀಗಾಗಿ ಹರಿಯುವ ನೀರಿನಲ್ಲಿ ಕೋಳಿ ಮಾಂಸವನ್ನು ತೊಳೆಯುವುದರಿಂದ ಕಲುಷಿತ ನೀರಿನ ಹನಿಗಳು ಸಿಂಕ್, ಅಡುಗೆ ಕೋಣೆಯ ಇತರ ಭಾಗಗಳು, ಪಾತ್ರೆಗಳು ಮತ್ತು ಇತರ ಆಹಾರ ಪದಾರ್ಥಗಳ ಮೇಲೆ ಚಿಮ್ಮಬಹುದು.

ಅಡುಗೆಮನೆಯ ಸಿಂಕ್ ಬಳಿ ಸಾಮಾನ್ಯವಾಗಿ ತೊಳೆದಿಟ್ಟ ಹಣ್ಣುಗಳು, ಒಣಗುವ ಟವೆಲ್ ಗಳು, ಸ್ವಚ್ಛವಾದ ಚಮಚಗಳು ಅಥವಾ ತೆರೆದ ಬಟ್ಟಲಿನಲ್ಲಿರುವ ಸಲಾಡ್ ಹೀಗೆ ನಾನಾ ವಸ್ತುಗಳು ಇರಬಹುದು. ಹೀಗಾಗಿ ಸಾಲ್ಮೊನೆಲ್ಲಾವನ್ನು ಹೊತ್ತಿರುವ ಸೂಕ್ಷ್ಮ ನೀರಿನ ಹನಿಗಳು ಸಾಮಾನ್ಯ ಅಡುಗೆಮನೆಯ ಕೌಂಟರ್ ಅನ್ನು ಆಹಾರ ಸುರಕ್ಷತೆಯ ಅಪಾಯದ ತಾಣವಾಗಿ ಪರಿವರ್ತಿಸಬಹುದು.

ನೀರಿನಿಂದ ಸ್ವಚ್ಛಗೊಳಿಸಲು ಸಾಧ್ಯವಾಗದೆ ಇದ್ದರೆ, ಮಾಂಸವನ್ನು ಹೇಗೆ ಸ್ವಚ್ಛಗೊಳಿಸಬಹುದು? "ಹರಿಯುವ ನೀರು, ವಿನೆಗರ್ ಅಥವಾ ನಿಂಬೆ ರಸ ಯಾವುದೂ ಹಸಿ ಮಾಂಸವನ್ನು ಹೆಚ್ಚಿನ ಶಾಖದಷ್ಟು ಪರಿಣಾಮಕಾರಿಯಾಗಿ ಶುದ್ಧೀಕರಿಸಲಾರದು. ಹೀಗಾಗಿ ಶಾಖವೇ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ತೊಳೆದು ಪ್ರಯೋಜನವಿಲ್ಲ" ಎನ್ನುತ್ತಾರೆ ಅಲೋಕ್ ಚೋಪ್ರಾ.

ಕೋಳಿ ಮಾಂಸದ ಸಂಪೂರ್ಣ ಸುರಕ್ಷತೆ ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಅಡುಗೆಯವರು ಅನುಸರಿಸಬೇಕಾದ ನಿಖರವಾದ ವಿಧಾನವನ್ನು ಡಾ. ಅಲೋಕ್ ಚೋಪ್ರಾ ವಿವರಿಸಿದ್ದಾರೆ. "ಕೋಳಿಯನ್ನು 165°F (ಸುಮಾರು 74°C) ಆಂತರಿಕ ತಾಪಮಾನಕ್ಕೆ ಬೇಯಿಸಿ. ಈ ತಾಪಮಾನವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಕೋಳಿ ತಿನ್ನಲು ಸುರಕ್ಷಿತವಾಗಿರುತ್ತದೆ."

ಕೋಳಿಯನ್ನು ಸುರಕ್ಷಿತವಾಗಿ ನಿಭಾಯಿಸುವುದು

"ಮೊದಲಿಗೆ ಅಭ್ಯಾಸವನ್ನು ಮುರಿಯುವುದು ಅನನುಕೂಲವೆನಿಸಬಹುದು. ಆದರೆ ನಿಮ್ಮ ದಿನಚರಿ ಸರಿಹೊಂದಿಸುವುದು ಆಶ್ಚರ್ಯಕರವಾಗಿ ಸುಲಭ. ಸಿಂಕ್ ಬಿಟ್ಟುಬಿಡಿ, ನೇರವಾಗಿ ಪ್ಯಾನ್ ಗೆ ಹೋಗಿ" ಎನ್ನುತ್ತಾರೆ ವೈದ್ಯರು.

ಅಡುಗೆಗೆ ಸಿದ್ಧತೆ ನಡೆಸುವ ಪ್ರಕ್ರಿಯೆಯನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ ಮತ್ತು ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಇರಿಸಿಕೊಳ್ಳಲು ಅವರು ತಮ್ಮ ಪೋಸ್ಟ್ ನಲ್ಲಿ ಶಿಫಾರಸು ಮಾಡಿರುವ ಹಂತ-ಹಂತದ ವಿಧಾನ ಇಲ್ಲಿದೆ:

1. ಕೋಳಿ ಮಾಂಸವನ್ನು ಪ್ಯಾಕೇಜ್ನಿಂದ ನೇರವಾಗಿ ಪ್ಯಾನ್ ಗೆ ವರ್ಗಾಯಿಸಿ. ತೊಳೆಯುವ ಅಗತ್ಯವಿಲ್ಲ. ಹೆಚ್ಚು ತೇವಾಂಶವಿದ್ದರೆ, ಒಣ ಪೇಪರ್ ಟವೆಲ್ ನಿಂದ ನಿಧಾನವಾಗಿ ಒರೆಸಿ. ನಂತರ ಟವೆಲ್ ಅನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಿ.

2. ಹಸಿ ಮಾಂಸ ಸ್ಪರ್ಶಿಸಿದ ನಂತರ ಅಡುಗೆಮನೆಯಲ್ಲಿ ಬೇರೆ ಯಾವುದನ್ನಾದರೂ ಮುಟ್ಟುವ ಮೊದಲು ಕೈಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಹಸಿ ಕೋಳಿ ಮಾಂಸ ತಗಲಿದ ಮೇಲ್ಮೈಗಳನ್ನು ಸ್ವಚ್ಛಗೊಳಿಸಿ. ಹಸಿ ಮಾಂಸಕ್ಕಾಗಿ ಪ್ರತ್ಯೇಕ ಕತ್ತರಿಸುವ ಹಲಗೆಗಳನ್ನು ಬಳಸಿ. ಬಳಕೆಯ ನಂತರ ಅಡುಗೆಮನೆಯ ಸಂಬಂಧಿಸಿದ ಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಅಡುಗೆಗೆ ಸಂಬಂಧಿಸಿದ ಹಳೆಯ ಪದ್ಧತಿಗಳನ್ನು ಬದಲಿಸುವುದು ಕಷ್ಟವಾಗಬಹುದು. ಆದರೆ ಆಹಾರದ ಮೂಲಕ ಹರಡುವ ರೋಗಕಾರಕಗಳ ವಿಷಯಕ್ಕೆ ಬಂದರೆ, ಸಿಂಕ್ ನಲ್ಲಿ ಮಾಂಸ ತೊಳೆಯುವ ಅಭ್ಯಾಸ ಬಿಡುವುದು ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಅತ್ಯಂತ ಸರಳ ಮತ್ತು ಉತ್ತಮ ಬದಲಾವಣೆ ಎನ್ನುತ್ತಾರೆ ವೈದ್ಯರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi