Friday, 30 Oct, 12.10 am ವಾರ್ತಾಭಾರತಿ

ಕ್ರೀಡೆ
ಐಪಿಎಲ್: ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಅಗ್ರ-5 ಬೌಲರ್‌ಗಳು

ಹೊಸದಿಲ್ಲಿ: ಅಬ್ಬರದ ಪ್ರದರ್ಶನ ನೀಡುವ ಬ್ಯಾಟ್ಸ್‌ಮನ್‌ಗಳಂತೆಯೇ 2020ರ ಆವೃತ್ತಿಯ ಐಪಿಎಲ್‌ನಲ್ಲಿ ಬೌಲರ್‌ಗಳು ಕೂಡ ಯಾರ್ಕರ್‌ಗಳು ಹಾಗೂ ಸ್ವಿಂಗ್ ಎಸೆತಗಳ ಮೂಲಕ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಕೆಲವು ಬೌಲರ್‌ಗಳ ಅಮೋಘ ಪ್ರದರ್ಶನ ನೀಡಿದ್ದಾರೆ. ಈತನಕ ಟೂರ್ನಿಯಲ್ಲಿ 48 ಐಪಿಎಲ್ ಪಂದ್ಯಗಳು ನಡೆದಿದ್ದು, ಪರಿಣಾಮಕಾರಿ ಪ್ರದರ್ಶನ ನೀಡಿರುವ ಬೌಲರ್‌ಗಳತ್ತ ಒಂದು ನೋಟ...

ಕಾಗಿಸೊ ರಬಾಡ(ಡೆಲ್ಲಿ ಕ್ಯಾಪಿಟಲ್ಸ್)-12 ಪಂದ್ಯಗಳಲ್ಲಿ 23 ವಿಕೆಟ್‌ಗಳು

ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ರಬಾಡ ಪ್ರಸ್ತುತ ಐಪಿಎಲ್‌ನ ಉತ್ತಮ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪರ್ಪಲ್ ಕ್ಯಾಪ್‌ನ್ನು ತನ್ನಲ್ಲೇ ಭದ್ರವಾಗಿ ಇಟ್ಟುಕೊಂಡಿದ್ದಾರೆ. ಡೆಲ್ಲಿ ಪರ ಈ ವರ್ಷದ ಐಪಿಎಲ್‌ನಲ್ಲಿ ರಬಾಡ 8.13ರ ಇಕಾನಮಿ ದರದಲ್ಲಿ 12 ಪಂದ್ಯಗಳಲ್ಲಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆರ್‌ಸಿಬಿ ವಿರುದ್ಧ ಶ್ರೇಷ್ಠ ಬೌಲಿಂಗ್(4-24)ಸಂಘಟಿಸಿದ್ದಾರೆ. 25ರ ಹರೆಯದ ರಬಾಡ ಟೂರ್ನಿಯಲ್ಲಿ ಈ ತನಕ 47.4 ಓವರ್‌ಗಳ ಬೌಲಿಂಗ್ ಮಾಡಿದ್ದು, ಇದರಲ್ಲಿ ಒಂದು ಮೇಡನ್ ಇದೆ. ಈ ಋತುವಿನಲ್ಲಿ ಒಂದು ಬಾರಿ 4 ವಿಕೆಟ್‌ಗಳ ಗುಚ್ಛ ಪಡೆದಿದ್ದಾರೆ.

ಜಸ್‌ಪ್ರೀತ್ ಬುಮ್ರಾ(ಮುಂಬೈ ಇಂಡಿಯನ್ಸ್)-12 ಪಂದ್ಯಗಳಲ್ಲಿ 20 ವಿಕೆಟ್‌ಗಳು

ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯ ಬುಮ್ರಾ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲು ಪ್ರಮುಖ ಪಾತ್ರವಹಿಸಿದ್ದಾರೆ. 26ರ ಹರೆಯದ ಬುಮ್ರಾ 12 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಪ್ರಸ್ತುತ ಬುಮ್ರಾ ಟೂರ್ನಿಯಲ್ಲಿ 2ನೇ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. 4-20 ಅವರ ಶ್ರೇಷ್ಠ ಬೌಲಿಂಗ್. ಈ ಋತುವಿನಲ್ಲಿ ಒಂದು ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದಾರೆ.

ಮುಹಮ್ಮದ್ ಶಮಿ(ಕಿಂಗ್ಸ್ ಇಲೆವೆನ್ ಪಂಜಾಬ್)-12 ಪಂದ್ಯಗಳು, 20 ವಿಕೆಟ್‌ಗಳು

ಭಾರತದ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಟ್ವೆಂಟಿ-20 ಕ್ರಿಕೆಟ್‌ನಲ್ಲೂ ಮಿಂಚುತ್ತಿದ್ದು, ಈ ವರ್ಷದ ಐಪಿಎಲ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 8.46ರ ಇಕಾನಮಿ ರೇಟ್‌ನಲ್ಲಿ ಒಟ್ಟು 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶಮಿ 3ನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಬೌಲಿಂಗ್ ವಿಭಾಗದ ನೇತೃತ್ವವಹಿಸಿರುವ ಶಮಿ 15 ರನ್‌ಗೆ 3 ವಿಕೆಟ್‌ಗಳ ಪಡೆದು ಶ್ರೇಷ್ಠ ಪ್ರದರ್ಶನ ನೀಡಿದ್ದರು.

ಯಜುವೇಂದ್ರ ಚಹಾಲ್(ರಾಯಲ್ ಚಾಲೆಂಜರ್ಸ್ ಬೆಂಗಳೂರು)12 ಪಂದ್ಯಗಳು, 18 ವಿಕೆಟ್

ಬ್ಯಾಟ್ಸ್‌ಮನ್‌ನನ್ನು ಮೀರಿ ಯೋಚನೆ-ಇದು ಲೆಗ್ ಸ್ಪಿನ್ನರ್ ಚಹಾಲ್ ಪಾಲಿಸುತ್ತಿರುವ ಮಂತ್ರ. ರಾಷ್ಟ್ರೀಯ ಮಟ್ಟದ ಮಾಜಿ ಜೂನಿಯರ್ ಚೆಸ್ ಚಾಂಪಿಯನ್ ಚಹಾಲ್ ಬ್ಯಾಟ್ಸ್‌ಮನ್‌ಗಳ ಅಂಗಭಾಷೆಯನ್ನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.ಹರ್ಯಾಣದ ಚಹಾಲ್ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದಲ್ಲಿ ಓರ್ವ ಯಶಸ್ವಿ ಬೌಲರ್ ಆಗಿದ್ದು, ಲೀಗ್‌ನಲ್ಲಿ ಈ ತನಕ 12 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಚಹಾಲ್ ಶ್ರೇಷ್ಠ ಬೌಲಿಂಗ್ 3-18.

ರಶೀದ್ ಖಾನ್ (ಸನ್‌ರೈಸರ್ಸ್ ಹೈದರಾಬಾದ್)-12 ಪಂದ್ಯಗಳಲ್ಲಿ 17 ವಿಕೆಟ್‌ಗಳು

ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ವಿಶ್ವದ ಹೆಚ್ಚಿನೆಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರ ಬೌಲಿಂಗ್ ಹೇಗಿರುತ್ತದೆ ಎಂದು ಅಂದಾಜಿಸಲು ಬ್ಯಾಟ್ಸ್ ಮನ್‌ಗಳಿಗೆ ಸಾಧ್ಯವಾಗುತ್ತಿಲ್ಲ. 22ರ ಹರೆಯದ ಖಾನ್ ಈ ವರ್ಷದ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಕೇವಲ 5 ಇಕಾನಮಿ ರೇಟ್‌ನಲ್ಲಿ 12 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರಶೀದ್ ಶ್ರೇಷ್ಠ ಬೌಲಿಂಗ್ 3/7. ಈ ಋತುವಿನಲ್ಲಿ ರಶೀದ್ ಶ್ರೇಷ್ಠ ಇಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದು, ಆರ್‌ಸಿಬಿಯ ವಾಷಿಂಗ್ಟನ್ ಸುಂದರ್(5.65)ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top