Dailyhunt Logo
  • Light mode
    Follow system
    Dark mode
    • Play Story
    • App Story
Allahabad High Court | ಸಾಕ್ಷ್ಯಾಧಾರಗಳ ಕೊರತೆ: UAPA ಪ್ರಕರಣದಲ್ಲಿ ಬೀದಿ ಬದಿ ವ್ಯಾಪಾರಿಗೆ ಜಾಮೀನು

Allahabad High Court | ಸಾಕ್ಷ್ಯಾಧಾರಗಳ ಕೊರತೆ: UAPA ಪ್ರಕರಣದಲ್ಲಿ ಬೀದಿ ಬದಿ ವ್ಯಾಪಾರಿಗೆ ಜಾಮೀನು

ಅಲಹಾಬಾದ್, ಜೂ. 3: ಭಯೋತ್ಪಾದನೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪಗಳನ್ನು ಬೆಂಬಲಿಸುವ ಸ್ವತಂತ್ರ ಸಾಕ್ಷ್ಯಾಧಾರಗಳನ್ನು ತನಿಖಾ ಸಂಸ್ಥೆ ಸಂಗ್ರಹಿಸಿಲ್ಲ ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್‌ ನ ಲಕ್ನೊ ಪೀಠವು, ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳಡಿ ಆರೋಪಿ ಬೀದಿ ವ್ಯಾಪಾರಿ ಅಝರುದ್ದೀನ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಲಕ್ನೊ ವಿಶೇಷ ನ್ಯಾಯಾಧೀಶರ 2023ರ ಸೆಪ್ಟೆಂಬರ್ 27ರ ಆದೇಶವನ್ನು ಪ್ರಶ್ನಿಸಿ ಅಝರುದ್ದೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಹಾಗೂ ಝಫೀರ್ ಅಹ್ಮದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ ಕೆಳನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಜಾಮೀನು ನೀಡಿತು.

ಲಕ್ನೊ ನ ಗೋಮತಿ ನಗರದಲ್ಲಿರುವ ಭಯೋತ್ಪಾದನಾ ನಿಗ್ರಹ ದಳ (ATS) ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳು ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.

ಅರ್ಜಿದಾರರ ಪರ ವಕೀಲರು, ಅಝರುದ್ದೀನ್ ಅವರಿಂದ ಪೆನ್‌ಡ್ರೈವ್, ಮೊಬೈಲ್ ಫೋನ್ ಮತ್ತು 'ಜಿಹಾದ್ ಸಾಹಿತ್ಯ' ಎಂದು ತನಿಖಾ ಸಂಸ್ಥೆ ವರ್ಣಿಸಿರುವ ಪುಸ್ತಕವೊಂದನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಹೊರತುಪಡಿಸಿ ಅವರ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಯಾವುದೇ ವಸ್ತುನಿಷ್ಠ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳು, ಮೆಮೊರಿ ಕಾರ್ಡ್‌ಗಳು ಹಾಗೂ ಇತರ ಸಾಹಿತ್ಯಗಳನ್ನು ಅಝರುದ್ದೀನ್ ತಯಾರಿಸಿಲ್ಲ. ಅವುಗಳನ್ನು ಸಹಆರೋಪಿ ಲುಕ್ಮಾನ್ ತಯಾರಿಸಿದ್ದಾನೆ ಎಂದು ವಕೀಲರು ವಾದಿಸಿದರು.

ಈ ಪ್ರಕರಣದಲ್ಲೇ ಸೂಕ್ತ ನೆಲೆ ಹಾಗೂ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, 2024ರ ಮೇ ತಿಂಗಳಲ್ಲಿ ಲುಕ್ಮಾನ್ ಸೇರಿದಂತೆ 11 ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು.

ಪ್ರಕರಣದ ಪ್ರಕಾರ, ಹಲವು ಆರೋಪಿಗಳು ನಿಷೇಧಿತ ಸಂಘಟನೆಗಳಾದ ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಮತ್ತು ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ATS 2022ರ ಸೆಪ್ಟೆಂಬರ್‌ ನಲ್ಲಿ ಎಫ್‌ಐಆರ್ ದಾಖಲಿಸಿತ್ತು.

ಅಝರುದ್ದೀನ್ ವಿರುದ್ಧದ ಆರೋಪಗಳು ಮುಖ್ಯವಾಗಿ ಸಹಆರೋಪಿಗಳ ಹೇಳಿಕೆಗಳು ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಅವರು ನೀಡಿರುವುದಾಗಿ ಹೇಳಲಾದ ತಪ್ಪೊಪ್ಪಿಗೆಯ ಹೇಳಿಕೆಯನ್ನು ಆಧರಿಸಿವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನು ಹೊರತುಪಡಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲು ನೆರವಾಗುವ ಯಾವುದೇ ಸ್ವತಂತ್ರ ಅಥವಾ ನೇರ ಸಾಕ್ಷ್ಯಾಧಾರಗಳನ್ನು ತನಿಖಾ ಸಂಸ್ಥೆ ಮಂಡಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi