ವಾಶಿಂಗ್ಟನ್: ಟ್ರಂಪ್ ಆಡಳಿತದ ಉನ್ನತ ಸ್ತರದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿದ್ದು, ಮುಂದಿನ ಸುತ್ತಿನಲ್ಲಿ ಅಧ್ಯಕ್ಷ ಟ್ರಂಪ್ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ನ್ಯಾಶನಲ್ ಇಂಟೆಲಿಜನ್ಸ್ ನಿರ್ದೇಶಕಿ ತುಳಸಿ ಗ್ಯಾಬರ್ಡ್ ಅವರನ್ನು ವಜಾಗೊಳಿಸುವ ಸಾಧ್ಯತೆ ಬಗ್ಗೆ ಊಹಾಪೋಹಗಳು ಹರಡಿವೆ.
ಮುಂದಿನ ಸುತ್ತಿನಲ್ಲಿ ಕಾಶ್ ಪಟೇಲ್, ಸೇನಾ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕೋಲ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚವೇಝ್-ಡೆರೆಮರ್ ಅವರನ್ನು ವಜಾಗೊಳಿಸುವ ಸಾಧ್ಯತೆ ಕುರಿತು ಆಂತರಿಕ ವಲಯದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು 'ದ ಅಟ್ಲಾಂಟಿಕ್' ವರದಿ ತಿಳಿಸಿದೆ. ಆದರೆ ಇದು ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಷಯದಲ್ಲಿ ಅಧ್ಯಕ್ಷ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಇವರ ಕಾರ್ಯನಿರ್ವಹಣೆಯ ಮೇಲೂ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
''ಸಂಪೂರ್ಣ ಪುನರ್‌ರಚನೆ''ಯ ಭಾಗವಾಗಿ ಪಟೇಲ್ ಅವರನ್ನು ತಕ್ಷಣವೇ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಕನ್ಸರ್ವೇಟಿವ್ ವೀಕ್ಷಕ ಕೈಲ್ ಸೆರಾಫಿನ್ ತಿಳಿಸಿದ್ದಾರೆ.

