ಬೆಂಗಳೂರು : ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧದ ಸಂದರ್ಭದಲ್ಲಿ ಭಾರತ ಸಂದಾನ ನಡೆಸುವ ಯಾವುದೇ ಒಂದು ಪ್ರಯತ್ನ ಮಾಡದಿರುವುದರಿಂದ, ಇಂದು ಪಾಕಿಸ್ತಾನಕ್ಕೆ ಆ ಮರ್ಯಾದೆ ಸಿಕ್ಕಿದೆ. ಇಂತಹ ಸನ್ನಿವೇಶದಲ್ಲಿ ಶಾಂತಿ ಸಂದಾನಕ್ಕೆ ಭಾರತ ಮುನ್ನುಗ್ಗಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಸಲಹೆ ನೀಡಿದ್ದಾರೆ.
ಬುಧವಾರ ನಗರದ ಟೌನ್‍ಹಾಲ್ ಮುಂಭಾಗ ಸಮಾನ ಮನಸ್ಕರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ 'ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ' ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಶತಮಾನದ ದೊಡ್ಡ ದೌರ್ಭಾಗ್ಯವೆಂದರೆ ಭಾರತ 70 ವರ್ಷಗಳಲ್ಲಿ ಸಾಧಿಸಿದ್ದಂತ ಶಾಂತಿ ಸಂದಾನದ ಸಾಧನೆಯನ್ನು ಇಂದಿನ ಕೇಂದ್ರ ಸರಕಾರ ನೀರಿನ ಹೋಮ ಮಾಡಿ, ಅಮೆರಿಕ ಜೊತೆಗೆ ಕೈಜೋಡಿಸಿ, ಭಾರತಕ್ಕೆ ಕೆಟ್ಟ ಹೆಸರು ತಂದಿದೆ ಎಂದು ದೂರಿದರು.
ಭಾರತದ ನಾಯಕರು ಅಮೆರಿಕ ಜೊತೆಗೆ ಕೈ ಜೋಡಿಸುವಂತಹ ಕೆಟ್ಟ ಕೆಲಸ ಮಾಡಬೇಡಿ. ನಿರ್ಲಿಪ್ತ ದೇಶವಾಗಿ ಎರಡು ದೇಶಗಳ ಜೊತೆಗೂ ಒಳ್ಳೆಯ ಸಂಬಂಧ ಇಟ್ಟುಕೊಂಡು, ಅವರೊಂದಿಗೆ ಕಿತ್ತಾಡದೆ, ಯುದ್ಧ ಮಾಡುವ ಯಾವುದೇ ರಾಷ್ಟ್ರದ ಜೊತೆ ಕೈ ಜೋಡಿಸದೇ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂದುವರೆಯಿರಿ ಎಂದು ರವಿವರ್ಮ ಕುಮಾರ್ ಮನವಿ ಮಾಡಿದರು.
ಶಾಂತಿಗಾಗಿ ನಾಗರಿಕರ ವೇದಿಕೆಯ ಪ್ರೊ.ನಗರಗೆರೆ ರಮೇಶ್ ಮಾತನಾಡಿ, 'ಯುದ್ಧ ಬೇಡ ಶಾಂತಿ ಬೇಕು ಎದು ಯಾರೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಗತ್ತಿನ ಎಲ್ಲ ವಾಸಿಗಳಿಗೂ ಬೇಕಾದಂತದ್ದು. ಯುದ್ಧಗಳು ಬಂದಾಗ ಸಾವನೋವುಗಳಿಗೆ ಹೆಚ್ಚಾಗಿ ಗುರಿಯಾಗುವರು ಸಾಮಾನ್ಯ ಜನರು. ಸಾಮ್ರಾಜ್ಯಶಾಹಿಗಳು, ಆಳುವವರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರವನ್ನು ಸಂಪಾದನೆ ಮಾಡಿಕೊಳ್ಳುವುದಕ್ಕೆ, ಸಂಪಾದನೆ ಮಾಡಿರುವ ಅಧಿಕಾರವನ್ನು ಗಟ್ಟಿಗೊಳಿಸುವುದಕ್ಕೆ, ಸಂಪತ್ತನ್ನು ಹೆಚ್ಚು ಗಳಿಸಿಕೊಳ್ಳುವುದಕ್ಕೆ ಯುದ್ಧವನ್ನು ಬಯಸುತ್ತಾರೆ ಎಂದರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಮಾತನಾಡಿ, ಜಗತ್ತಿನಲ್ಲಿ ಯುದ್ಧ ಸರ್ವನಾಶ ಮಾಡುವಂತದ್ದು. ಪ್ರಸ್ತುತ ಶಾಂತಿಯ ಕಾಲವಾಗಬೇಕು, ಯುದ್ಧದ ಕಾಲವಲ್ಲ. ಪಂಪ ಯುದ್ಧ ವಿರೋಧಿಯಾಗಿದ್ದ. ಮನುಷ್ಯರಿಗೆ ಸಂಕಟವನ್ನು ತಂದಿಡುವ ಯುದ್ಧ ಭೂಮಿಯನ್ನು ನಾಶ ಮಾಡಿದರೆ ಬದುಕುವುದಾದರೂ ಹೇಗೆ? ಯುದ್ಧದ ಪರವಾಗಿ ನಿಂತರೆ ನಮ್ಮ ಮಕ್ಕಳಿಗೆ ಮುಂದಿನ ಭವಿಷ್ಯ ಇರುವುದಿಲ್ಲ. ಮನುಷ್ಯ ವಿರೋಧಿ ಯುದ್ಧ ನಿಲ್ಲಬೇಕು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲೂ ಯುದ್ಧ ನಡೆಯಬಾರದು ಎಂದು ಹೇಳಿದರು.
ಜಾಗೃತಿ ಅಭಿಯಾನದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ಚಿಂತಕ ಶಿವಸುಂದರ್, ಹಿರಿಯ ಲೇಖಕ ಡಾ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಿಪಿಎಂ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ನಾಗೇಶ್ ಅರಳಕುಪ್ಪೆ, ವಕೀಲ ನರಸಿಂಹಮೂರ್ತಿ, ಇ.ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

