ಉಡುಪಿ, ಎ.8: ಉಡುಪಿ ಪೂರ್ಣಪ್ರಜ್ಞ ಕಾಲೇಜು(ಸ್ವಾಯತ್ತ), ಆಯೋಜಿಸಿದ ರಾಜ್ಯ ಮಟ್ಟದ ಎರಡು ದಿನಗಳ ಅಂತರ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ಪ್ರಜ್ಞಾ 2026'ರ ಸಮಾರೋಪ ಸಮಾರಂಭವು ಮಂಗಳವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಿತು.
ಎರಡು ದಿನಗಳಲ್ಲಿ 33 ಶೈಕ್ಷಣಿಕ ಹಾಗೂ 6 ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ರಾಜ್ಯದ ಸುಮಾರು 29 ಕಾಲೇಜುಗಳಿಂದ 562 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮತ್ತು 10,000ರೂ. ನಗದನ್ನು ಕುಂದಾಪುರ ಡಾ.ಬಿ.ಬಿ.ಹೆಗಡೆ ಕಾಲೇಜು ಹಾಗೂ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಡುಪಿ ಎಂಜಿಎಂ ಕಾಲೇಜು ಪಡೆದುಕೊಂಡಿತು.
ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ವನ್ನು ತಮ್ಮಲ್ಲಿ ಮೈಗೂಡಿಸಿ ಕೊಂಡರೆ ಶ್ರೇಷ್ಠತೆಯನ್ನು ತಮ್ಮದಾಗಿಸಿಕೊಂಡು, ಸಮಾಜಕ್ಕೆ ಉತ್ತಮ ಆಸ್ತಿ ಆಗಬಹುದು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒಳ್ಳೆಯ ಜ್ಞಾನ, ಪ್ರತಿಭೆ ಸಂಸ್ಕಾರ ಪಡೆದು ಸಮನ್ವಯದ ದೇಶವನ್ನು ನಿರ್ಮಿಸಲು ಕಾರಣರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ಮಹಾಮಾಯ ಪ್ರಸಾದ್ ರಾಯ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ರಾಮು. ಎಲ್ ವಹಿಸಿದ್ದರು.
ಎಸ್‌ಬಿಐ ರೀಜನಲ್ ಆಫೀಸ್ ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ ಭಟ್ ಕೀಳಿಂಜೆ, ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ತುಂಗ, ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹ ಸಂಯೋಜಕ ಡಾ.ಲಕ್ಷ್ಮೀಶ ರಾವ್, ಡಾ.ಆನಂದ ರಾಯಮಾನೆ, ಡಾ. ಮಂಜುನಾಥ ಕರಬ, ಡಾ.ಸಂದೀಪ್ ಸತ್ಯಮೂರ್ತಿ, ಧನ್ಯಶ್ರೀ, ಸುಮಲತಾ ಪಿ.ಜೆ., ಡಾ.ಶಿವಕುಮಾರ್ ಅಳಗೋಡು, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಭಟ್, ಕೆ.ಪಿ.ನೇಹಾ ಉಪಸ್ಥಿತರಿದ್ದರು.
ಡಾ.ರಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪ್ರತಿಭಾ ಸಿ.ಆಚಾರ್ಯ ಸ್ವಾಗತಿಸಿ, ಡಾ.ಸೌಮ್ಯ ಶೆಟ್ಟಿ ವಂದಿಸಿದರು.

