ಉಡುಪಿ, ಸೆ.12: ನಿತ್ಯ ಜೀವನದ ಅನುಭವಗಳಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತಿ ನೀತಿಬೋಧಕ ಅಥವಾ ಧರ್ಮ ಬೋಧಕ ಅಲ್ಲ, ಆದರೆ ಸಮಾಜದ ಅಂಕುಡೊಂಕುಗಳನ್ನು ತನ್ನ ಬರವಣಿಗೆಯ ಮೂಲಕ ತಿದ್ದುವ ಚಿಕಿತ್ಸಕ. ಬರವಣಿಗೆ ಮೂಲಕ ವಿಚಾರದ ಬೆಳಕು ಚೆಲ್ಲಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವವರು ಕವಿಗಳು.ಅಂತರಂಗ ಅರಳಿದಾಗ ಅನುಭವ ಪ್ರಪಂಚ ವಿಸ್ತಾರವಾದಾಗ ಸಾಹಿತ್ಯ ಹುಟ್ಟುತ್ತದೆ ಎಂದು ಹಿರಿಯ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ ಇವರ ಸಹಯೋಗದಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಡಾ. ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಗ್ರಂಥಾಲಯದಲ್ಲಿ ಸಾಹಿತಿ ಸೌರಭ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಹಿತಿ ಅಥವಾ ಕವಿ ವ್ಯಥೆ ಪಡುವುದಿಲ್ಲ. ಬದಲಿಗೆ ವ್ಯಥೆಯನ್ನು ಕಥೆ ಮಾಡುವ ಶಕ್ತಿ ಅವರಲ್ಲಿರುತ್ತದೆ. ತಾಯಿ ತನ್ನ ಮಕ್ಕಳಿಗೆ ಚಿಕ್ಕಂದಿನಲ್ಲಿ ಕಥೆ ಶಿಶು ಗೀತೆಗಳು ಹೇಳುತ್ತಾ ಒಬ್ಬ ಸಾಹಿತಿಯಾಗಿ ರೂಪಗೊಳ್ಳುತ್ತಾಳೆ. ಮಕ್ಕಳಲ್ಲಿ ಓದುವ ಹವ್ಯಾಸ ಇರಬೇಕು. ತಮ್ಮ ಜೀವನದ ಅನುಭವಗಳನ್ನು ಬರೆಯುವ ಅಭ್ಯಾಸವನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದರು.
ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜಿಲ್ಲಾಧಿಕಾರಿ ಅವರ ಮುತುವರ್ಜಿ ಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಎಲ್ಲರೂ ಮೆಚ್ಚುವಂತಹ ಕಾರ್ಯ ವಾಗಿದೆ. ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿ ಬೆಳೆಯಬೇಕು, ಜೊತೆಗೆ ಯುವಜನತೆಗೆ ಸಾಹಿತಿಗಳ ಪರಿಚಯವು ಆಗಬೇಕು ಎಂದು ಅವರು ಹೇಳಿದರು.
ಮುಖ್ಯ ಗ್ರಂಥಾಲಯ ಅಧಿಕಾರಿ(ಪ್ರ) ವಿನುತಾ ಬಿ ಸ್ವಾಗತಿಸಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ವನಿತಾ ಕೆ ವಂದಿಸಿದರು. ಶ್ಯಾಮಲಾ ಸಾಹಿತಿಗಳ ಪರಿಚಯ ನೀಡಿದರೆ, ಪ್ರಥಮ ದರ್ಜೆ ಸಹಾಯಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು.

