ಬಾಗಲಕೋಟೆ: ನಾನು ಅಸಮಾನತೆ ವಿರುದ್ಧ ಇದ್ದೇನೆ, ಶೋಷಿತರ ಪರವಾಗಿ ಇದ್ದೇನೆ ಎನ್ನುವ ಕಾರಣಕ್ಕೆ ಆರೆಸ್ಸೆಸ್ ಮತ್ತು ಮನುವಾದಿಗಳು ನನ್ನ ಮೇಲೆ ದಾಳಿ ಮಾಡುತ್ತಾರೆ. ಮಾಜಿ ಸಂಸದ ಪ್ರತಾಪ್ ಸಿಂಹನ ಮೂಲಕ ನನ್ನನ್ನು ಗುರಿಯಾಗಿಸಿ, ಟಾರ್ಗೆಟ್ ಮಾಡಿಸಿ ಹೇಳಿಕೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಬಾಗಲಕೋಟೆಯಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ 'ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ' ಆಯೋಜಿಸಿದ್ದ ಶೋಷಿತರ ಜಾಗೃತ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ, ಆರೆಸ್ಸೆಸ್ ಮತ್ತು ಮನುವಾದಿಗಳ ಷಡ್ಯಂತ್ರವನ್ನು ಅರಿತು ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ನಿಮಗೆ ಮಾತ್ರ ಇದೆ ಎಂದರು.
ಈ ಕಾರಣಕ್ಕೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಬೇಕು. ಈ ದಿಕ್ಕಿನಲ್ಲಿ ಶ್ರಮ ಹಾಕಿ ಎಂದು ಮನವಿ ಮಾಡಿದ ಸಿದ್ದರಾಮಯ್ಯ, ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ನುಡಿದರು.
ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಅಗತ್ಯ ಎನ್ನುವ ಅಂಬೇಡ್ಕರ್ ಆಶಯದಂತೆ ಕಾಂಗ್ರೆಸ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅಕ್ಷರ ಸಂಸ್ಕøತಿಯಿಂದ ವಂಚಿತರಾದವರು ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ಇದರಿಂದ ಹಿಂದುಳಿದವರು ಅವಕಾಶಗಳಿಂದ ವಂಚಿತರಾಗುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ದೇವರಾಜ ಅರಸು ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ನಿಗಮ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿದೆ. ಈ ಸಮುದಾಯಗಳು ಸಾಲದಿಂದ ಮುಕ್ತರಾಗಬೇಕು ಎನ್ನುವ ಉದ್ದೇಶದಿಂದ ಇದನ್ನು ಮಾಡಿದೆ ಎಂದು ಅವರು ಹೇಳಿದರು.
ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದೇ ಹೋದರೆ ಉತ್ಪಾದನೆ ಕುಸಿಯುತ್ತದೆ. ಆದುದರಿಂದ, ಜನರ ಕೊಳ್ಳುವ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸಭೆಯಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಆರ್.ಬಿ.ತಿಮ್ಮಾಪುರ್, ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸೇರಿದಂತೆ ಪದಾಧಿಕಾರಿಗಳು, ಶಾಸಕರು ಉಪಸ್ಥಿತರಿದ್ದರು.

