ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಯ ಮುನ್ನ ಗೋಮಾಂಸ ಸೇವನೆ ವಿಚಾರ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಗೋಮಾಂಸ ಸೇವನೆಯನ್ನು ನಿಷೇಧಿಸಲು ಸರ್ಕಾರ ಪ್ರಯತ್ನಿಸುತ್ತಿಲ್ಲ. ಆದರೆ ಅದು ಖಾಸಗಿ ಸ್ಥಳಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
"ಅಸ್ಸಾಂನಲ್ಲಿ ಗೋಮಾಂಸ ಸೇವಿಸುವ ದೊಡ್ಡ ಮುಸ್ಲಿಂ ಸಮುದಾಯವಿದೆ. ನಾನು ಅದನ್ನು ನಿಲ್ಲಿಸುತ್ತಿಲ್ಲ. ಆದರೆ ಅದನ್ನು ನಿಮ್ಮ ಮನೆಯೊಳಗೆ ತಿನ್ನಿ; ಸಾರ್ವಜನಿಕ ಸ್ಥಳಗಳಲ್ಲಿ ತಿನ್ನಬೇಡಿ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾನೂನಿನ ಪ್ರಕಾರ ದೇವಾಲಯಗಳ 5 ಕಿಮೀ ವ್ಯಾಪ್ತಿಯಲ್ಲಿ ಗೋಮಾಂಸ ಸೇವನೆ ಮಾಡಬಾರದು ಎಂದು ಅವರು ಒತ್ತಿ ಹೇಳಿದರು. ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆ, 2021 ಪ್ರಕಾರ ಖಾಸಗಿ ಸೇವನೆಗೆ ನಿರ್ಬಂಧವಿಲ್ಲದಿದ್ದರೂ, ರೆಸ್ಟೋರೆಂಟ್ ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ದೇವಾಲಯಗಳು ಮತ್ತು ಛತ್ರಗಳ ಸುತ್ತಮುತ್ತ 5 ಕಿಮೀ ವ್ಯಾಪ್ತಿಯಲ್ಲಿ ಗೋಮಾಂಸದ ಮಾರಾಟ ಮತ್ತು ಸೇವನೆಗೆ ನಿಷೇಧವಿದೆ.
ಕೆಲವರು ಗೋಮಾಂಸದ ಬದಲಿಗೆ ಎಮ್ಮೆ ಮಾಂಸ ಸೇವನೆಗೆ ಮಾಡುತ್ತಿದ್ದಾರೆ ಎಂದು ಶರ್ಮಾ ಹೇಳಿದರು. ತಮ್ಮ ಮನವಿ ಮುಸ್ಲಿಂ ಸಮುದಾಯಕ್ಕಿಂತ ಹಿಂದೂಗಳಿಗೆ ಹೆಚ್ಚು ಉದ್ದೇಶಿತವಾಗಿದೆ ಎಂದೂ ಅವರು ಹೇಳಿದರು.
ಶರ್ಮಾ ನೀಡಿದ ಹೇಳಿಕೆಗಳನ್ನು ಖಂಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಸಮಯದಲ್ಲಿ ಗೋಮಾಂಸ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಶರ್ಮಾ ಅವರ ಹೇಳಿಕೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.
ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಅಭ್ಯರ್ಥಿ ಕುಂಕಿ ಚೌಧರಿ ಅವರ ಪೋಷಕರು ಗೋಮಾಂಸ ಸೇವಿಸಿದ್ದಾರೆ ಮತ್ತು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶರ್ಮಾ ಎಚ್ಚರಿಸಿದ್ದರು.
"ಚುನಾವಣೆಯ ನಂತರ ಅವರ ಪೋಷಕರ ವಿರುದ್ಧ ಗೋ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇನೆ. ನಾನು ಎಲ್ಲವನ್ನೂ ಸಹಿಸುತ್ತೇನೆ, ಆದರೆ ಬೀಫ್ ಸೇವನೆಯನ್ನು ಸಹಿಸುವುದಿಲ್ಲ" ಎಂದು ಅವರು ಹೇಳಿದ್ದರು.
ಗುವಾಹಟಿ ಕೇಂದ್ರ ಕ್ಷೇತ್ರದ ಅಭ್ಯರ್ಥಿ ಕುಂಕಿ ಚೌಧರಿ ಆರೋಪಗಳನ್ನು ತಳ್ಳಿಹಾಕಿ, ಅವು ನಕಲಿ ಮತ್ತು ರಾಜಕೀಯ ಪ್ರೇರಿತವೆಂದು ಹೇಳಿದ್ದಾರೆ. ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ಡೀಪ್‌ಫೇಕ್ ವೀಡಿಯೊಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿರುವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
126 ಸದಸ್ಯರ ಅಸ್ಸಾಂ ವಿಧಾನಸಭೆಗೆ ಗುರುವಾರ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

