ಹೊಸದಿಲ್ಲಿ: ಅವಿವಾಹಿತ ಪುತ್ರಿಯ ಗರ್ಭಧಾರಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ 18 ವರ್ಷದ ಯುವತಿಯನ್ನು ತಂದೆ ಹಾಗೂ ಅಳಿಯ ಹತ್ಯೆಗೈದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ಮೃತದೇಹವನ್ನು ಚಂಬಲ್ ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಮೃತದೇಹವನ್ನು ಪತ್ತೆಹಚ್ಚಲು ಚಂಬಲ್ ನದಿಯಲ್ಲಿ ಬುಧವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಈ ಪ್ರಕರಣ ದಿಲ್ಲಿಯ ಟಿಗ್ರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ್ದು, ಮೃತ ಯುವತಿಯ ಕುಟುಂಬವು ಹಲವು ವರ್ಷಗಳ ಹಿಂದೆ ಆಗ್ರಾ ಜಿಲ್ಲೆಯ ಬಸೋನಿ ಗ್ರಾಮದಿಂದ ದಿಲ್ಲಿಗೆ ಸ್ಥಳಾಂತರಗೊಂಡಿತ್ತು. ಮೃತ ಯುವತಿಯ ತಂದೆ ಟೆಂಟ್ ಹಾಗೂ ವಿವಾಹ ಸಮಾರಂಭಗಳ ಸೇವಾ ವ್ಯವಹಾರ ನಡೆಸುತ್ತಿದ್ದರು.
ಪೊಲೀಸರ ಪ್ರಕಾರ, ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕನಿಂದ ತನ್ನ ಅವಿವಾಹಿತ ಪುತ್ರಿ ಗರ್ಭಿಣಿಯಾಗಿರುವುದು ತಿಳಿದ ಬಳಿಕ ತಂದೆ ತೀವ್ರ ಅಸಮಾಧಾನಗೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಪುತ್ರಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯೋಜನೆಯಂತೆ, ಚಿಕಿತ್ಸೆ ಕೊಡಿಸುವ ನೆಪದಲ್ಲಿ ತಂದೆ ಯುವತಿಯನ್ನು ಆಗ್ರಾಗೆ ಕರೆದೊಯ್ದಿದ್ದಾನೆ. ಜುಲೈ 28ರಂದು ಆತನ ಅಳಿಯ, ಮೃತ ಯುವತಿಯ ಸಹೋದರಿಯ ಪತಿ, ಅವರೊಂದಿಗೆ ಸೇರಿಕೊಂಡಿದ್ದಾನೆ. ಬಳಿಕ ಯುವತಿ ತನ್ನ ತವರು ಗ್ರಾಮಕ್ಕೆ ತೆರಳಿ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದಾಳೆ.
ಮರುದಿನ ಬೆಳಗ್ಗೆ ತಂದೆ ಹಾಗೂ ಅಳಿಯ ಯುವತಿಯನ್ನು ಬಸೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂಬಲ್ ನದಿ ತೀರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ತಂದೆ ಒತ್ತಡ ಹೇರಿದ್ದಾನೆ. ಯುವತಿ ನಿರಾಕರಿಸಿದಾಗ, ಇಬ್ಬರೂ ಸೇರಿ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಮೃತದೇಹವನ್ನು ಚಂಬಲ್ ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ತಮ್ಮ ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಸಾಕ್ಷ್ಯ ಸೃಷ್ಟಿಸಲು ಆರೋಪಿಗಳು ನದಿ ತೀರದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಮೃತದೇಹಕ್ಕೆ ಅಂತ್ಯಕ್ರಿಯೆ ನಡೆಸಿದಂತೆ ಸೋಗು ಹಾಕಿ, ದೇಹವು ನದಿಯಲ್ಲಿ ಕೊಚ್ಚಿಕೊಂಡು ಹೋದ ಬಳಿಕ ದಿಲ್ಲಿಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಫೋಟೋಗಳಲ್ಲಿ ಮೃತ ಯುವತಿಯ ತಂದೆ ಕ್ಯಾಮೆರಾದತ್ತ ನೋಡುತ್ತಾ ಭಂಗಿ ನೀಡಿರುವುದು ತನಿಖಾಧಿಕಾರಿಗಳಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಈ ಚಿತ್ರಗಳ ಆಧಾರದಲ್ಲಿ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿಗೆ ಮರಳಿದ ಬಳಿಕ ತನ್ನ ಪುತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ ಎಂದು ತಂದೆ ನೆರೆಹೊರೆಯವರಿಗೆ ತಿಳಿಸಿದ್ದಾನೆ. ತನ್ನ ಹೇಳಿಕೆಗೆ ಸಮರ್ಥನೆಯಾಗಿ ಮೊಬೈಲ್ ನಲ್ಲಿ ಸಂಗ್ರಹಿಸಿಕೊಂಡಿದ್ದ ಫೋಟೋಗಳನ್ನು ಅವರಿಗೆ ತೋರಿಸಿದ್ದಾನೆ ಎನ್ನಲಾಗಿದೆ.
ಪಿನಾಹತ್ ಸಹಾಯಕ ಪೊಲೀಸ್ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಆರಂಭದಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಯುವತಿಯ ಸಾವಿನಲ್ಲಿ ತಂದೆಯ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಂದೆ ಹಾಗೂ ಆತನ ಅಳಿಯ ವಿರುದ್ಧ ಹತ್ಯೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳನ್ನು ಆಗಸ್ಟ್ 1ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಐದು ದಿನಗಳ ಪೊಲೀಸ್ ವಶಕ್ಕೆ ಪಡೆದು ಆಗ್ರಾಗೆ ಕರೆತರಲಾಗಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಘಟನಾ ಸ್ಥಳದಲ್ಲಿ ಮರುನಿರ್ಮಾಣ ನಡೆಸಲಾಗುತ್ತಿದ್ದು, ಮೃತದೇಹ ಪತ್ತೆಗಾಗಿ ಚಂಬಲ್ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಬುಧವಾರವೂ ಶೋಧ ನಡೆಸಿದರೂ ಈವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

