ಕಾಬೂಲ್, ಅ.18: ಅಫ್ಗಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆದು ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ತಕ್ಷಣದಿಂದ ಆರಂಭಿಸಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಝಾಯ್ ಆಗ್ರಹಿಸಿದ್ದಾರೆ.
ಬಾಲಕಿಯರನ್ನು ಶಾಲೆಗೆ ತೆರಳದಂತೆ ನಿಷೇಧಿಸುವುದನ್ನು ಧರ್ಮವು ಸಮರ್ಥಿಸುವುದಿಲ್ಲ ಎಂದು ತಾಲಿಬಾನ್ಗಳಿಗೆ ಸ್ಪಷ್ಟಪಡಿಸುವಂತೆ ಅವರು ಮುಸ್ಲಿಮ್ ರಾಷ್ಟ್ರಗಳ ಮುಖಂಡರನ್ನು ಕೋರಿದ್ದಾರೆ.
ಅಫ್ಗಾನಿಸ್ತಾನ ಮಹಿಳೆಯರಿಗೆ ಶಿಕ್ಷಣಾವಕಾಶ ನಿಷೇಧಿಸಿರುವ ಏಕೈಕ ರಾಷ್ಟ್ರವಾಗಿದೆ. ಆದ್ದರಿಂದ ಈ ನಿಷೇಧ ಹಿಂಪಡೆಯುವಂತೆ ತಾಲಿಬಾನ್ಗಳ ಮೇಲೆ ಒತ್ತಡ ಹೇರಬೇಕು ಮತ್ತು ಅಫ್ಗಾನಿಸ್ತಾನದ ಮಕ್ಕಳಿಗೆ ಶಿಕ್ಷಣ ಯೋಜನೆ ರೂಪಿಸಲು ತುರ್ತಾಗಿ ಆರ್ಥಿಕ ನೆರವು ಒದಗಿಸುವಂತೆ ಜಿ20 ದೇಶಗಳ ಮುಖಂಡರಿಗೆ ಮನವಿ ಮಾಡಲಾಗಿದೆ.
ಬಾಲಕಿಯರ ಶಿಕ್ಷಣಕ್ಕಾಗಿ ಕೆಲಸ ಮಾಡುವ ಸಂಘಟನೆಯ ಕಾರ್ಯಕರ್ತೆಯಾಗಿರುವ ಮಲಾಲಾ ಮೇಲೆ 2012ರಲ್ಲಿ ತಾಲಿಬಾನ್ಗಳ ಸಹಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಗುಂಡಿನ ದಾಳಿ ನಡೆಸಿತ್ತು

