ಬೆಂಗಳೂರು : ಬಾಗಲಕೋಟೆ ಮತ್ತು ದಾವಣೆಗೆರೆ ವಿಧಾನಸಭೆ ಉಪಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ನಗದು ಬಿಡುಗಡೆ ಮಾಡದಂತೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ
ಗ್ಯಾರಂಟಿ ಯೋಜನೆಗಳ ಭಾಗವಾಗಿ ನಗದು ಬಿಡುಗಡೆಯನ್ನು ಕಳೆದ ಆರೇಳು ತಿಂಗಳಿಂದ ತಡೆಹಿಡಿಯಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಪ ಚುನಾವಣೆಯನ್ನು ಕೇಂದ್ರೀಕರಿಸಿ ಏಕಕಾಲಕ್ಕೆ ಬಾಕಿ ಪಾವತಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ದಾವಣಗೆರೆ ದಕ್ಷಿಣ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಗೌತಮ್ ಕುಮಾರ್ ಯು.
ಜೈನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಉಪ ಚುನಾವಣೆ ಮುಗಿಯುವವರೆಗೆ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಬೇಕು ಅಥವಾ ಹಣ ಬಿಡುಗಡೆಯನ್ನು ಮುಂದೂಡಲು ನಿರ್ದೇಶಿಸಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಲು ನಿರಾಕರಿಸಿತು.
ಪ್ರಕರಣದಲ್ಲಿ ನ್ಯಾಯಾಲಯ ಮಾಡುವ ಯಾವುದೇ ಆದೇಶವು ಅಂತಿಮವಾಗಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹಾನಿ ಮಾಡಲಿದೆ. ರಾಜ್ಯ ಸರಕಾರ ನೀತಿ ಜಾರಿಗೊಳಿಸಿದ್ದು, ಅದನ್ನು ಮುಂದುವರಿಸುತ್ತಿದೆ ಎಂದು ಮೌಖಿಕವಾಗಿ ನುಡಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ಸರಕಾರ, ರಾಜ್ಯ ಸರಕಾರ, ಕೇಂದ್ರ ಚುನಾವಣಾ ಆಯೋಗ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಚುನಾವಣಾ ಆಯೋಗವು ಶಕ್ತಿಯುತವಾಗಿದ್ದು, ಕಾನೂನಿನ ಅನ್ವಯ ಅವರು ಕ್ರಮಕೈಗೊಳ್ಳಲಿದ್ದಾರೆ. ಆರು ತಿಂಗಳಿಂದ ಗ್ಯಾರಂಟಿ ಯೋಜನೆಗಳ ಹಣ ನೀಡಲಾಗಿಲ್ಲ ಎಂಬುದಕ್ಕೆ ದಾಖಲೆ ಸಲ್ಲಿಸಬೇಕು. ಹಣ ನೀಡಿರುವ ದಾಖಲೆ ನಾವು ತೋರಿಸಿದರೆ ಅರ್ಜಿದಾರರಿಗೆ ದಂಡ ವಿಧಿಸಬೇಕು. ಫೆಬ್ರವರಿವರೆಗೆ ಎಲ್ಲವನ್ನೂ ವಿತರಿಸಿರುವುದಕ್ಕೆ ದಾಖಲೆ ಸಲ್ಲಿಸುತ್ತೇನೆ. ಒಂದೆರಡು ತಿಂಗಳು ವಿಳಂಬವಾಗಿರಬಹುದು. ಚುನಾವಣಾ ಆಯೋಗವು ಹಲ್ಲಿಲ್ಲದ ಹಾವಲ್ಲ. ನಾವು ನಿಯಮ ಉಲ್ಲಂಘಿಸಿದರೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದರು.
ಮುಂದುವರಿದು, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಯುವನಿಧಿ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದು 2,500-4,000 ಇರಬೇಕು. ಬಾಗಲಕೋಟೆ, ದಾವಣಗೆರೆ ಮತ್ತು ಇನ್ನೊಂದು ಜಿಲ್ಲೆ ಸೇರಿ ಮೂರು ಜಿಲ್ಲೆಗಳಿಂದ 58 ಸಾವಿರ ಗೃಹ ಲಕ್ಷ್ಮಿ ಫಲಾನುಭವಿಗಳಿದ್ದಾರೆ. ಫಲಾನುಭವಿಗಳನ್ನು ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನ ಪತ್ತೆ ಮಾಡಿದ್ದರೆ ಅದನ್ನು ಮುಂದುವರಿಸಬಹುದು ಎಂಬುದು ನಿಯಮವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಸರಕಾರ ಸರಿಯಾಗಿ ಜಾರಿಗೊಳಿಸಿಲ್ಲ. ಆರು ತಿಂಗಳಿಂದ ಅನ್ನಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ನೀಡುವುದೇ ಅಥವಾ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಮೊದಲೇ ನೀಡುವುದೇ ಎಂಬುದು ಇಲ್ಲಿನ ವಿಷಯವಾಗಿದೆ. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೂ ಮುನ್ನ ಸರಕಾರ ಆಯೋಗದಿಂದ ಅನುಮತಿ ಪಡೆದಿಲ್ಲ. ಉಪ ಚುನಾವಣೆ ಮುಗಿಯುವವರೆಗೆ ಹಣ ಬಿಡುಗಡೆ ಮಾಡಬಾರದು ಎಂಬುದು ನಮ್ಮ ಮನವಿಯಾಗಿದೆ ಎಂದರು.
ಉಚಿತ ಉಡುಗೊರೆಗಳು ದೇಶದ ಬೆಳವಣಿಗೆಗೆ ಮಾರಕ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಾರ್ಚ್ 23ರಂದು ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅದು ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಆಯೋಗದ ಅನುಮತಿ ಪಡೆದು, ಬಿಡುಗಡೆ ಮಾಡಲಿ. ಆರು ತಿಂಗಳಿಂದ ಅನ್ನ ಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಬಳಿಕ ಫಲಾನುಭವಿಗಳ ಸಂಖ್ಯೆಯನ್ನು ಸರಕಾರ ಹೆಚ್ಚಿಸಿದೆ. ಬಾಗಲಕೋಟೆಯಲ್ಲಿ 2026ರ ಜನವರಿಯಲ್ಲಿ 3,75,268 ಇದ್ದ ಫಲಾನುಭವಿಗಳ ಸಂಖ್ಯೆ ಮಾರ್ಚ್ 25ಕ್ಕೆ 3,76,001ಕ್ಕೆ ಏರಿಕೆಯಾಗಿದೆ ಎಂದು ಅರುಣ್ ಶ್ಯಾಮ್ ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿತಲ್ಲದೆ, ಮಧ್ಯಂತರ ತಡೆ ನೀಡಲು ನಿರಾಕರಿಸಿ, ಅರ್ಜಿ ವಿಚಾರಣೆ ಮುಂದೂಡಿತು.

