Dailyhunt Logo
  • Light mode
    Follow system
    Dark mode
    • Play Story
    • App Story
ಬಲವಂತದ ದುಡಿಮೆಯಿಂದ ತಯಾರಿಸಲಾದ ಉತ್ಪನ್ನಗಳ ಆಮದು ಆರೋಪ; ಭಾರತ ಸೇರಿ 54 ದೇಶಗಳ ಮೇಲೆ ಶೇ.12 ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಪ್ರಸ್ತಾವ

ಬಲವಂತದ ದುಡಿಮೆಯಿಂದ ತಯಾರಿಸಲಾದ ಉತ್ಪನ್ನಗಳ ಆಮದು ಆರೋಪ; ಭಾರತ ಸೇರಿ 54 ದೇಶಗಳ ಮೇಲೆ ಶೇ.12 ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಪ್ರಸ್ತಾವ

ವಾಷಿಂಗ್ಟನ್, ಜೂ. 3: ಬಲವಂತದ ದುಡಿಮೆಯಿಂದ ತಯಾರಿಸಲಾದ ಉತ್ಪನ್ನಗಳು ತಮ್ಮ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಲು ವಿಫಲವಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ 54 ರಾಷ್ಟ್ರಗಳ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವವನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಸಲ್ಲಿಸಿದೆ.

ಬಲವಂತದ ದುಡಿಮೆಯಿಂದ ಉತ್ಪಾದಿಸಲಾದ ಸರಕುಗಳ ಆಮದನ್ನು ತಡೆಯಲು ಈ ದೇಶಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದ ಬಳಿಕ ಈ ಪ್ರಸ್ತಾವ ಮಾಡಲಾಗಿದೆ.

ಬಲವಂತದ ದುಡಿಮೆಯಿಂದ ತಯಾರಿಸಲಾದ ಉತ್ಪನ್ನಗಳ ಆಮದನ್ನು ನಿಷೇಧಿಸಲು ಹಾಗೂ ತಡೆಯಲು ಈ ರಾಷ್ಟ್ರಗಳು ವಿಫಲವಾಗಿವೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಯಭಾರಿ ಜೇಮಿಸನ್ ಗ್ರೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ನಮ್ಮ ವ್ಯಾಪಾರ ಪಾಲುದಾರರು ಬಲವಂತದ ದುಡಿಮೆಯಿಂದ ತಯಾರಾದ ಉತ್ಪನ್ನಗಳ ಆಮದನ್ನು ತಡೆಯುವಲ್ಲಿ ವಿಫಲರಾಗಿರುವುದು ಸ್ವೀಕಾರಾರ್ಹವಲ್ಲ. ಇದರಿಂದ ಅಮೆರಿಕದ ಕಾರ್ಮಿಕರು ಜಾಗತಿಕ ಮಟ್ಟದಲ್ಲಿ ಅಸಮಾನ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಈ ಅಸಮಾನತೆಯನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.

ಭಾರತ, ಚೀನಾ, ಜಪಾನ್, ಬ್ರೆಜಿಲ್, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಸೌದಿ ಅರೇಬಿಯಾ ಸೇರಿದಂತೆ 54 ದೇಶಗಳು ಬಲವಂತದ ದುಡಿಮೆಯಿಂದ ತಯಾರಾದ ಉತ್ಪನ್ನಗಳ ಆಮದು ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿವೆ ಎಂದು ಯುಎಸ್‌ಟಿಆರ್ ಹೇಳಿದೆ. ಈ ದೇಶಗಳ ಮೇಲೆ ಶೇ.12 ಹೆಚ್ಚುವರಿ ಸುಂಕ ವಿಧಿಸುವಂತೆ ಅಮೆರಿಕ ಸರ್ಕಾರಕ್ಕೆ ಪ್ರಸ್ತಾವಿಸಿದೆ.

ಈ ಮಧ್ಯೆ, ಕೆನಡಾ, ಈಕ್ವೆಡಾರ್, ಯುರೋಪಿಯನ್ ಒಕ್ಕೂಟ, ಇಂಡೊನೇಷ್ಯಾ, ಮೆಕ್ಸಿಕೊ ಹಾಗೂ ಪಾಕಿಸ್ತಾನದಲ್ಲಿ ಬಲವಂತದ ದುಡಿಮೆಯಿಂದ ತಯಾರಿಸಲಾದ ಸರಕುಗಳ ಆಮದಿಗೆ ನಿಷೇಧ ಹೇರಲಾಗಿದ್ದರೂ, ಅದರ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬುದು ಯುಎಸ್‌ಟಿಆರ್ ತನಿಖೆಯಿಂದ ತಿಳಿದುಬಂದಿದೆ.

ಇದರ ಜೊತೆಗೆ, ಆಯ್ದ ದೇಶಗಳಿಂದ ಅಮೆರಿಕಕ್ಕೆ ರಫ್ತಾಗುವ ನಿರ್ದಿಷ್ಟ ಪ್ರಮಾಣದ ಜವಳಿ ಹಾಗೂ ಉಡುಪುಗಳಿಗೆ ಕಡಿಮೆ ಸುಂಕ ವಿಧಿಸುವ ಜವಳಿ ಕಾರ್ಯನೀತಿಯನ್ನೂ ಯುಎಸ್‌ಟಿಆರ್ ಪ್ರಸ್ತಾಪಿಸಿದೆ.

ಭಾರತದ ವಿರೋಧ

ಅಮೆರಿಕದ ಬಲವಂತದ ದುಡಿಮೆಗೆ ಸಂಬಂಧಿಸಿದ ಕಾನೂನುಗಳನ್ನು ಭಾರತ ಪ್ರಶ್ನಿಸಿದ್ದು, ಈ ಕ್ರಮಗಳನ್ನು ಮುಂದುವರಿಸದಂತೆ ಆಗ್ರಹಿಸಿದೆ. ಪ್ರಸ್ತುತ ಉಭಯ ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ಮೂಲಕ ಈ ವಿವಾದವನ್ನು ಬಗೆಹರಿಸಬೇಕೆಂದು ಭಾರತ ಒತ್ತಾಯಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi