ಢಾಕಾ, ನ. 24: ಗಾಜಿಪುರ ಕೈಗಾರಿಕಾ ವಲಯದಲ್ಲಿ ಕಾರ್ಮಿಕರು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದರಿಂದ ಮಂಗಳವಾರ ಬಾಂಗ್ಲಾದೇಶದ ಸಿದ್ಧ ಉಡುಪು (ಗಾರ್ಮೆಂಟ್ಸ್) ಉದ್ಯಮವು ಮತ್ತೊಮ್ಮೆ ಪ್ರಕ್ಷುಬ್ಧತೆಗೆ ಸಿಲುಕಿದೆ. ನವೆಂಬರ್ ಆರಂಭದಿಂದಲೂ ಉತ್ಪಾದನೆಗೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ವೇತನ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಭಟನೆಗಳಿಂದಾಗಿ ಹತ್ತಾರು ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ.
ಪೊಲೀಸರೊಂದಿಗೆ ಕಾರ್ಮಿಕರು ಘರ್ಷಣೆ ನಡೆಸಿದ್ದಾರೆ.
ಢಾಕಾ-ಟಾಂಗೈಲ್ ಮತ್ತು ಢಾಕಾ-ಮೈಮೆನ್ಸಿಂಗ್ ಹೆದ್ದಾರಿಗಳ ಹಲವು ಕಡೆಗಳಲ್ಲಿ ಅಶಾಂತಿ ಹರಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಸೌಂಡ್ ಗ್ರೆನೇಡ್ಗಳನ್ನು ಬಳಸಿದ್ದಾರೆ. ಪ್ರತಿಭಟನೆಯ ವೇಳೆ ಪೊಲೀಸ್ ಚೌಕಿಯೊಂದನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ `ಪ್ರೊಥೋಮ್ ಅಲೋ' ವರದಿ ಮಾಡಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಗಾಜಿಪುರ ನಗರದ ನವೋಜೋರ್, ಕೋನಾಬರಿ, ಜಾರುನ್, ಮೌಚಕ್ ಮತ್ತು ತೆಲಿರ್ಚಾಲಾ ಹಾಗೂ ಗಾಜಿಪುರ ಸದರ್ ನ ಮೆಂಬರ್ಬರಿ ಮತ್ತು ಬಾಗೇರ್ ಬಜಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಮಿಕರು ಜಮಾಯಿಸಲು ಆರಂಭಿಸಿದರು. ಈ ಪ್ರತಿಭಟನೆಗಳು ಶೀಘ್ರದಲ್ಲೇ ಪ್ರಮುಖ ರಸ್ತೆಗಳಿಗೆ ವ್ಯಾಪಿಸಿದ್ದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಪ್ರಯಾಣಿಕರು ಮತ್ತು ಸಾರಿಗೆ ನೌಕರರು ದಾರಿಯಲ್ಲೇ ಸಿಲುಕಿಕೊಳ್ಳುವಂತಾಯಿತು.
ಕೋನಾಬರಿಯ ಇಸ್ಲಾಂ ಗಾರ್ಮೆಂಟ್ಸ್ ಕಾರ್ಖಾನೆಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಎಂಬ ವದಂತಿ ಹರಡಿದ ಬಳಿಕ ಪ್ರತಿಭಟನೆ ತೀವ್ರಗೊಂಡಿತ್ತು. ಆದರೆ, ಯಾವುದೇ ಕಾರ್ಮಿಕ ಮೃತಪಟ್ಟಿಲ್ಲ ಎಂದು ಗಾಜಿಪುರ ಕೈಗಾರಿಕಾ ವಲಯದ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಮ್ಜದ್ ಹೊಸೈನ್ ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ರಸ್ತೆ ತೆರವುಗೊಳಿಸಲು ಮುಂದಾದಾಗ, ಕಾರ್ಮಿಕರು ಭೋಗ್ರಾ ಬೈಪಾಸ್, ಚೌರಸ್ತಾ ಮತ್ತು ಕೈಗಾರಿಕಾ ವಲಯದ ಇತರ ಭಾಗಗಳಲ್ಲಿಯೂ ರಸ್ತೆ ತಡೆ ನಡೆಸಿದರು.
ಹೆದ್ದಾರಿಯ ಬದಿಯಲ್ಲಿದ್ದ ಪೊಲೀಸ್ ಚೌಕಿಯನ್ನು ಕಾರ್ಮಿಕರು ಧ್ವಂಸಗೊಳಿಸಿ, ಅಲ್ಲಿದ್ದ ಕುರ್ಚಿ, ಮೇಜು ಸೇರಿದಂತೆ ಇತರ ವಸ್ತುಗಳನ್ನು ರಸ್ತೆಗೆ ತಂದು ಬೆಂಕಿ ಹಚ್ಚಿದರು. ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಿಂದ ಚದುರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು `ಪ್ರೊಥೋಮ್ ಅಲೋ' ವರದಿ ಮಾಡಿದೆ.
► 70 ಕಾರ್ಖಾನೆಗಳಿಗೆ ರಜೆ ಘೋಷಣೆ
ಅಶಾಂತಿಯ ಕಾರಣದಿಂದಾಗಿ ಭೋಗ್ರಾ ಬೈಪಾಸ್, ಚೌರಸ್ತಾ ಮತ್ತು ಕೋನಾಬರಿ ಪ್ರದೇಶಗಳಲ್ಲಿರುವ 70 ಕಾರ್ಖಾನೆಗಳು ರಜೆ ಘೋಷಿಸಿವೆ ಎಂದು ಕೈಗಾರಿಕಾ ಪೊಲೀಸರು ತಿಳಿಸಿದ್ದಾರೆ. ಇನ್ನೂ 32 ಕಾರ್ಖಾನೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಾರ್ಮಿಕರು ಮಾಸಿಕ ಕನಿಷ್ಠ ವೇತನವನ್ನು ಈಗಿರುವ 12,500 ಟಾಕಾದಿಂದ 30,000 ಟಾಕಾಗೆ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಆಹಾರ, ವಸತಿ ಮತ್ತು ಸಾರಿಗೆ ವೆಚ್ಚ ಹೆಚ್ಚಿರುವುದರಿಂದ ವೇತನ ಹೆಚ್ಚಳ ಅಗತ್ಯವಾಗಿದೆ ಎಂಬುದು ಅವರ ವಾದ. ಆದರೆ, ಶೇ. 15ಕ್ಕಿಂತ ಹೆಚ್ಚಿನ ವೇತನ ಹೆಚ್ಚಳ ಉದ್ಯಮಕ್ಕೆ ಹೊರೆಯಾಗಲಿದೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ.
ಈ ಸ್ಥಗಿತವು ಬಾಂಗ್ಲಾದೇಶದ ಸಿದ್ಧ ಉಡುಪು ವಲಯದ ಮೇಲಿನ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ವಲಯ ದೇಶದ ಪ್ರಮುಖ ಉದ್ಯೋಗ ಮತ್ತು ರಫ್ತು ಆದಾಯದ ಮೂಲವಾಗಿದೆ. ಚೀನಾದ ನಂತರ ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಸಿದ್ಧ ಉಡುಪು ರಫ್ತುದಾರ ರಾಷ್ಟ್ರವಾಗಿದ್ದು, ಈ ವಲಯದಲ್ಲಿ 40 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗದಲ್ಲಿದ್ದಾರೆ. ದೇಶದ ಒಟ್ಟು ರಫ್ತು ಆದಾಯದಲ್ಲಿ ಈ ಉದ್ಯಮದ ಪಾಲು ಶೇ. 80ಕ್ಕೂ ಹೆಚ್ಚಿದೆ.

