Dailyhunt
Bengaluru | ನೀರಿದ್ದ ಬಕೆಟ್‍ನೊಳಗೆ ಬಿದ್ದು ಉಸಿರುಗಟ್ಟಿ ಮಗು ಮೃತ್ಯು; ಆಘಾತಕ್ಕೊಳಗಾದ ತಾಯಿ ಆತ್ಮಹತ್ಯೆ

Bengaluru | ನೀರಿದ್ದ ಬಕೆಟ್‍ನೊಳಗೆ ಬಿದ್ದು ಉಸಿರುಗಟ್ಟಿ ಮಗು ಮೃತ್ಯು; ಆಘಾತಕ್ಕೊಳಗಾದ ತಾಯಿ ಆತ್ಮಹತ್ಯೆ

ಬೆಂಗಳೂರು : ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿರುವುದನ್ನು ಕಂಡು ಆಘಾತಕ್ಕೊಳಗಾದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಇಲ್ಲಿನ ನಾಗರಬಾವಿ ಮುಖ್ಯರಸ್ತೆ ಭೈರವೇಶ್ವರ ನಗರದ ಎರಡನೇ ಹಂತದ ನಿವಾಸಿ ಪ್ರತಿಭಾ (29) ಎಂಬುವವರೇ ಮಗು ಅಗಸ್ತ್ಯ(11 ತಿಂಗಳು) ಮೃತಪಟ್ಟಿರುವುದನ್ನು ಕಂಡು ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ಮಹಂತೇಶ್-ಪ್ರತಿಭಾ ದಂಪತಿ ಭೈರವೇಶ್ವರ ನಗರದಲ್ಲಿ ವಾಸವಾಗಿದ್ದು, ದಂಪತಿಗೆ 11 ತಿಂಗಳ ಗಂಡು ಮಗು ಇತ್ತು. ಮಹಂತೇಶ್ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದು, ಪತ್ನಿ ಪ್ರತಿಭಾ ಸಹ ಸಾಫ್ಟ್‌ ವೇರ್ ಇಂಜಿನಿಯರ್ ಆಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ ಎಂದಿನಂತೆ ಮಹಂತೇಶ್ ಅವರು ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ತಾಯಿ ಮತ್ತು ಮಗು ಇಬ್ಬರೇ ಇದ್ದರು. ಸಂಜೆ ವೇಳೆಗೆ ಮಗು ಆಟವಾಡುತ್ತಿದ್ದಾಗ ಪ್ರತಿಭಾ ಅವರು ಒಣಹಾಕಿದ್ದ ಬಟ್ಟೆ ತರಲು ಹೊರಗಡೆ ಹೋಗಿದ್ದಾರೆ.

ಆ ಸಂದರ್ಭದಲ್ಲಿ ಮಗು ಆಟವಾಡುತ್ತಾ ಬಕೆಟ್‍ನೊಳಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ. ಹೊರಗಡೆಯಿಂದ ಬಟ್ಟೆ ತೆಗೆದುಕೊಂಡು ಪ್ರತಿಭಾ ಅವರು ಮನೆಯೊಳಗೆ ಬಂದಾಗ ಮಗು ಕಾಣಿಸಿಲ್ಲ. ತಕ್ಷಣ ಮನೆಯೊಳಗೆಲ್ಲಾ ಹುಡುಕಿದರೂ ಕಾಣಿಸಿಲ್ಲ. ನಂತರ ಬಕೆಟ್ ನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ.

ಮಗುವಿನ ಸಾವಿನಿಂದ ಆಘಾತಕ್ಕೊಳಗಾದ ಪ್ರತಿಭಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೆ ಪತಿ ಮಹಂತೇಶ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತಾಯಿ-ಮಗುವಿನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಚಂದ್ರಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi