ಹೊಸದಿಲ್ಲಿ: ದಿಲ್ಲಿಯಲ್ಲಿ ಗುರುವಾರ ನಡೆದ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಫೆಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಎರಡು ರಾಷ್ಟ್ರಗಳ ಪರಿಹಾರವನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ಫೆಬ್ರವರಿ 28ರಿಂದ ಮುಂದುವರಿಯುತ್ತಿರುವ ಗಲ್ಫ್ ಪ್ರದೇಶದ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಲೇಖಿಸಿ, ಹಾರ್ಮುಝ್ ಜಲಸಂಧಿ ಮುಚ್ಚುವಿಕೆಯ ಪರಿಣಾಮವಾಗಿ ಜಲಸಾಗಣೆ ಮತ್ತು ಇಂಧನ ಮೂಲಸೌಕರ್ಯಗಳಿಗೆ ಉಂಟಾಗಿರುವ ಬೆದರಿಕೆಗಳು ಜಾಗತಿಕ ಭದ್ರತಾ ಪರಿಸ್ಥಿತಿಯನ್ನು ದುರ್ಬಲಗೊಳಿಸಿದೆ ಎಂದು ಜೈ ಶಂಕರ್ ಹೇಳಿದರು.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ವಿಶೇಷ ಗಮನಕ್ಕೆ ಅರ್ಹವಾಗಿದೆ. ನಿರಂತರ ಉದ್ವಿಗ್ನತೆಗಳು, ಸಮುದ್ರ ಸಂಚಾರಕ್ಕೆ ಅಪಾಯಗಳು ಮತ್ತು ಇಂಧನ ಮೂಲಸೌಕರ್ಯಕ್ಕೆ ಅಡ್ಡಿಗಳು ಪರಿಸ್ಥಿತಿಯ ದುರ್ಬಲತೆಯನ್ನು ಎತ್ತಿ ತೋರಿಸುತ್ತವೆ ಎಂದು ಜೈಶಂಕರ್ ಹೇಳಿರುವುದಾಗಿ ವರದಿಯಾಗಿದೆ.
ಇದಲ್ಲದೆ ಲೆಬನಾನ್, ಸಿರಿಯಾ, ಸುಡಾನ್, ಯೆಮೆನ್ ಮತ್ತು ಲಿಬಿಯಾ ಸೇರಿದಂತೆ ಈ ಪ್ರದೇಶದ ಇತರ ಭಾಗಗಳಲ್ಲಿನ ಅಸ್ಥಿರತೆ ಬಗ್ಗೆ ಸಬೆಯಲ್ಲಿ ಜೈಶಂಕರ್ ಗಮನ ಸೆಳೆದಿದ್ದಾರೆ.

