ಹೊಸದಿಲ್ಲಿ,ಎ.4: ಪ.ಏಶ್ಯಾ ಸಂಘರ್ಷದಿಂದಾಗಿ ಇಂಧನ ಆಮದುಗಳಲ್ಲಿ ಉಂಟಾಗಿರುವ ವ್ಯತ್ಯಯಗಳ ನಡುವೆ ತೈಲ ಪೂರೈಕೆಯನ್ನು ಭದ್ರಗೊಳಿಸಿಕೊಳ್ಳುವ ತಮ್ಮ ಪ್ರಯತ್ನಗಳ ಅಂಗವಾಗಿ ಭಾರತೀಯ ರಿಫೈನರಿಗಳು ಇರಾನಿ ಕಚ್ಚಾ ತೈಲವನ್ನು ಖರೀದಿಸುತ್ತಿವೆ ಮತ್ತು ಹಣಪಾವತಿಗೆ ಸಂಬಂಧಿತ ಯಾವುದೇ ಅಡೆತಡೆಗಳಿಲ್ಲ ಎಂದು ಸರಕಾರವು ಶನಿವಾರ ತಿಳಿಸಿದೆ.
ಇತ್ತೀಚಿಗೆ ಇರಾನಿ ತೈಲವನ್ನು ಭಾರತಕ್ಕೆ ಸಾಗಿಸುತ್ತಿದ್ದ ಟ್ಯಾಂಕರ್ ಚೀನಾದತ್ತ ತನ್ನ ದಿಕ್ಕು ಬದಲಿಸಿದ್ದಕ್ಕೆ ಹಣಪಾವತಿ ಸಮಸ್ಯೆ ಕಾರಣವಲ್ಲ ಎಂದೂ ಅದು ಹೇಳಿದೆ.
ಕಳೆದ ತಿಂಗಳು ಅಮೆರಿಕವು ಇರಾನ್ ಮೇಲಿನ ತೈಲ ನಿರ್ಬಂಧವನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಂಡ ಬಳಿಕ ಭಾರತವು ಇರಾನಿ ಕಚ್ಚಾ ತೈಲವನ್ನು ಖರೀದಿಸುತ್ತಿದೆ ಎಂದು ಸರಕಾರವು ಇದೇ ಮೊದಲ ಬಾರಿಗೆ ಅಧಿಕೃತವಾಗಿ ದೃಢಪಡಿಸಿದೆ. 44,000 ಮೆ.ಟನ್ ಇರಾನಿ ಎಲ್‌ಪಿಜಿ ಹೊತ್ತಿರುವ ಟ್ಯಾಂಕರ್ ಎ.2ರಂದು ಮಂಗಳೂರಿನಲ್ಲಿ ಲಂಗರು ಹಾಕಿದ್ದು, ಪ್ರಸ್ತುತ ಎಲ್‌ಪಿಜಿಯನ್ನು ಅನ್‌ಲೋಡ್ ಮಾಡಲಾಗುತ್ತಿದೆ ಎಂದೂ ಸರಕಾರವು ದೃಢಪಡಿಸಿದೆ. ಮುಂಬರುವ ತಿಂಗಳುಗಳಿಗಾಗಿ ಭಾರತದ ಕಚ್ಚಾತೈಲ ಪೂರೈಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಅದು ಪುನರುಚ್ಚರಿಸಿದೆ.
ಆರು ಲಕ್ಷ ಬ್ಯಾರೆಲ್ ಇರಾನಿ ಕಚ್ಚಾ ತೈಲವನ್ನು ಹೊತ್ತುಕೊಂಡು ಗುಜರಾತಿನ ವಾಡಿನಾರ್ ಬಂದರಿಗೆ ಆಗಮಿಸುತ್ತಿದ್ದ ಎಸ್ವಾಟಿನಿ ಧ್ವಜವನ್ನು ಹೊತ್ತಿರುವ ಪಿಂಗ್ ಷನ್ ಹಡಗು ಗುರುವಾರ ತನ್ನ ದಿಕ್ಕು ಬದಲಿಸಿ ಚೀನಾದ ಶಾಂಡೊಂಗ್ ಪ್ರಾಂತದ ಡೊಂಗ್ಯಿಂಗ್ ಕಡೆ ಚಲಿಸಿತ್ತು. ಟ್ಯಾಂಕರ್ ದಿಕ್ಕು ಬದಲಿಸಲು ಹಣಪಾವತಿಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಿರಬಹುದು ಎಂದು ವ್ಯಾಪಾರ ಮೂಲಗಳು ಸೂಚಿಸಿದ್ದವು. ಪಿಂಗ್ ಷನ್ ತನ್ನ ಪೂರ್ವನಿಗದಿತ ಗಮ್ಯತಾಣ ವಾಡಿನಾರ್‌ಗೆ ಆಗಮಿಸಿದ್ದರೆ ಅದು ಕಳೆದ ಏಳು ವರ್ಷಗಳಲ್ಲಿ ಇರಾನ್‌ನಿಂದ ಮೊದಲ ಕಚ್ಚಾ ತೈಲ ಆಮದು ಆಗಿರುತ್ತಿತ್ತು.
ಭಾರತವು 40ಕ್ಕೂ ಅಧಿಕ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ಕಂಪೆನಿಗಳು ವಿವಿಧ ಮೂಲಗಳಿಂದ ತೈಲವನ್ನು ಖರೀದಿಸಲು ಸ್ವತಂತ್ರವಾಗಿವೆ. ಮಧ್ಯ ಪ್ರಾಚ್ಯ ಪೂರೈಕೆ ಅಡಚಣೆಗಳ ನಡುವೆ ಭಾರತೀಯ ರಿಫೈನರಿಗಳು ಇರಾನ್ ಸೇರಿದಂತೆ ತಮ್ಮ ಕಚ್ಚಾತೈಲ ಪೂರೈಕೆಗಳು ಸುಭದ್ರವಾಗಿರುವಂತೆ ನೋಡಿಕೊಳ್ಳುತ್ತಿವೆ. ಹಬ್ಬಿಸಲಾಗುತ್ತಿರುವ ವದಂತಿಗಳಿಗೆ ವಿರುದ್ಧವಾಗಿ ಇರಾನಿನ ಕಚ್ಚಾತೈಲ ಆಮದುಗಳಿಗೆ ಯಾವುದೇ ಹಣಪಾವತಿ ಅಡಚಣೆಗಳಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಪಿಂಗ್ ಷನ್ ಟ್ಯಾಂಕರ್ ಭಾರತದ ಬದಲು ಚೀನಾದತ್ತ ತೆರಳಿರುವ ಕುರಿತು ಕಳವಳಗಳಿಗೆ ಪ್ರತಿಕ್ರಿಯಿಸಿರುವ ಸಚಿವಾಲಯವು, ಅಂತರರಾಷ್ಟ್ರೀಯ ತೈಲ ವ್ಯಾಪಾರದಲ್ಲಿ ಲೇಡಿಂಗ್ ಬಿಲ್‌ಗಳಲ್ಲಿ ಅಥವಾ ಸರಕು ಸಾಗಣೆ ರಸೀದಿ ಪತ್ರಗಳಲ್ಲಿ ಸಾಮಾನ್ಯವಾಗಿ ಹಡಗುಗಳ ಗಮ್ಯಸ್ಥಾನ ವನ್ನು ಸೂಚಿಸಲಾಗಿರುತ್ತದೆ. ಆದರೆ ಅದೇ ಅಂತಿಮವಲ್ಲ. ಸಮುದ್ರದಲ್ಲಿ ಸಾಗುತ್ತಿರುವ ಕಾರ್ಗೋಗಳು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಕಾರ್ಯಾಚರಣೆ ಸುಗಮತೆಗಳನ್ನು ಅವಲಂಬಿಸಿ ಪ್ರಯಾಣದ ಮಧ್ಯೆಯೇ ಗಮ್ಯಸ್ಥಾನವನ್ನು ಬದಲಿಸಬಹುದು ಎಂದು ತಿಳಿಸಿದೆ.

