Dailyhunt Logo
  • Light mode
    Follow system
    Dark mode
    • Play Story
    • App Story
ಭ್ರಷ್ಟಾಚಾರ ಪ್ರಕರಣ: ಮಾಜಿ ಅಧಿಕಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಚೀನಾ ನ್ಯಾಯಾಲಯ

ಭ್ರಷ್ಟಾಚಾರ ಪ್ರಕರಣ: ಮಾಜಿ ಅಧಿಕಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಚೀನಾ ನ್ಯಾಯಾಲಯ

ಬೀಜಿಂಗ್ : 30 ವರ್ಷಗಳಲ್ಲಿ ಸರಿಸುಮಾರು 3,000 ಕೋಟಿಗೂ ಅಧಿಕ ಲಂಚ ಪಡೆದ ಮಾಜಿ ಅಧಿಕಾರಿಯೊಬ್ಬರಿಗೆ ಚೀನಾದ ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ವಿಧಿಸಿದೆ.

1993ರಿಂದ 2023ರವರೆಗೆ ನಾನ್ ಜಿಂಗ್ ನಗರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಯಾಂಗ್ ಯೌಲಿನ್ ವಿರುದ್ಧ ಭ್ರಷ್ಟಾಚಾರ, ಹಣ ದುರುಪಯೋಗ, ಅಧಿಕಾರ ದುರ್ಬಳಕೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ.

ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪತ್ತೆಯಾದ ಅತಿದೊಡ್ಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ಇದು ಒಂದಾಗಿದೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಗುತ್ತಿಗೆ, ಭೂ ವರ್ಗಾವಣೆ ಹಾಗೂ ಹಣಕಾಸು ವ್ಯವಹಾರಕ್ಕೆ ನೆರವಾಗಿದ್ದ ಯಾಂಗ್ ಯೌಲಿನ್, ಅದಕ್ಕೆ ಪ್ರತಿಯಾಗಿ ಹಣ ಮತ್ತು ಅಮೂಲ್ಯ ವಸ್ತುಗಳನ್ನು ಸ್ವೀಕರಿಸುತ್ತಿದ್ದರು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಭ್ರಷ್ಟಾಚಾರ ವಿರೋಧಿ ಅಭಿಯಾನದ ಭಾಗವಾಗಿ ಯಾಂಗ್ ವಿರುದ್ಧ ತನಿಖೆ ನಡೆದಿತ್ತು. ಅವರು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಲವು ಅಭಿಯಾನಗಳನ್ನು ಆರಂಭಿಸಿದ್ದಾರೆ. ಆದರೆ, ಇದನ್ನು ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧದ ಸಾಧನವಾಗಿಯೂ ಬಳಸಿರುವ ಆರೋಪವೂ ಕೇಳಿ ಬಂದಿದೆ.

"ಯಾಂಗ್ ಯೌಲಿನ್ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳನ್ನು ಮಾಡಿದ್ದಾರೆ ಮತ್ತು ದೇಶ ಮತ್ತು ಜನರ ಹಿತಾಸಕ್ತಿಗೆ ಭಾರೀ ನಷ್ಟವನ್ನು ಉಂಟುಮಾಡಿದ್ದಾರೆ" ಎಂದು ಚಾಂಗ್ ಝೌ ನಗರದ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಬಿಳಿ ಕಾಲರ್ ಅಪರಾಧಗಳಿಗೆ ಮರಣದಂಡನೆ ವಿಧಿಸುವುದು ಚೀನಾದಲ್ಲಿ ಅಪರೂಪವಾದರೂ, 1 ಬಿಲಿಯನ್ ಯುವಾನ್‌ಗಿಂತ ಹೆಚ್ಚಿನ ಮೊತ್ತದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಂತಹ ಶಿಕ್ಷೆಯನ್ನು ಕೆಲವೊಮ್ಮೆ ವಿಧಿಸಲಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi