Dailyhunt Logo
  • Light mode
    Follow system
    Dark mode
    • Play Story
    • App Story
ಬಿಡದಿ ಟೌನ್‌ಶಿಪ್ ಯೋಜನೆ: ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಭೂಮಿಗೆ ಕನ್ನ

ಬಿಡದಿ ಟೌನ್‌ಶಿಪ್ ಯೋಜನೆ: ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಭೂಮಿಗೆ ಕನ್ನ

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ-ಕಂಚುಗಾರನಹಳ್ಳಿ ಪಂಚಾಯತ್ ವ್ಯಾಪ್ತಿಯ 26 ಗ್ರಾಮಗಳ ಒಟ್ಟು 9,640 ಎಕರೆ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಡದಿ ಉಪನಗರ (ಟೌನ್‌ಶಿಪ್)ಯೋಜನೆ ಭೂ ಸ್ವಾಧೀನಕ್ಕೆ 2025ರ ಮಾರ್ಚ್ 12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅನ್ನದಾತರನ್ನು ಆತಂಕಕ್ಕೆ ದೂಡಿದೆ.

ಉದ್ದೇಶಿತ 'ಟೌನ್‌ಶಿಪ್ ಯೋಜನೆಗೆ ಶೇ.80ರಷ್ಟು ರೈತರು ಭೂಮಿ ನೀಡಲು ಮುಂದೆ ಬಂದಿದ್ದು, ಸಾಧ್ಯವಾದಷ್ಟು ಬೇಗ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ರೈತರು 'ನಮ್ಮ ಭೂಮಿಯನ್ನು ಈ ಯೋಜನೆಗೆ ನೀಡುವುದಿಲ್ಲ' ಎಂದು 26ಗ್ರಾಮಗಳ ರೈತರು 'ಬೈರಮಂಗಲ, ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಂಘದ' ನೇತೃತ್ವದಲ್ಲಿ ಕೃಷಿ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬೇಕೆಂದು ಆಗ್ರಹಿಸಿ ಒಂದೂವರೆ ವರ್ಷದಿಂದ ಬೈರಮಂಗಲ ವೃತ್ತದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ. ಅಲ್ಲದೆ, ಯೋಜನೆಗೆ ವಿರೋಧ ವ್ಯಕ್ತಪಡಿಸಿ, ರೈತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಯೋಜನೆಗಾಗಿ ಗುರುತಿಸಿರುವ 9,640 ಎಕರೆ ಭೂಮಿಯ ಪೈಕಿ ಸುಮಾರು 6 ಸಾವಿರ ಎಕರೆ ಭೂಮಿಯಲ್ಲಿ 4ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳಿವೆ. ಮಾವು, ಸಪೋಟ, ಅಡಿಕೆ ಸೇರಿ ಒಟ್ಟು 10 ಲಕ್ಷಕ್ಕೂ ಅಧಿಕ ಮರ-ಗಿಡಗಳನ್ನು ಹೊಂದಿವೆೆ. 2ಸಾವಿರ ಎಕರೆಗೂ ಹೆಚ್ಚು ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತಾ, ತಿಂಗಳಿಗೆ ಸುಮಾರು 6 ರಿಂದ 8 ಕೋಟಿ ರೂ.ಹಣ ಸಂಪಾದಿಸಿ ಜೀವನ ಮಾಡುತ್ತಿದ್ದಾರೆ ಎಂದು ರೇಷ್ಮೆ ಇಲಾಖೆ ಮಾಹಿತಿ ನೀಡಿದೆ.

ಸಾವಿರ ಎಕರೆ ಭೂಮಿಯಲ್ಲಿ ಟೊಮೊಟೊ, ಹೀರೆಕಾಯಿ, ಬದನೆಕಾಯಿ, ಸೌತೆಕಾಯಿ, ಎಲೆಕೋಸು, ಹೂ ಕೋಸು, ಗೆಡ್ಡೆ ಕೋಸು, ಮೆಕ್ಕೆಜೋಳ ಹಾಗೂ ವಿವಿಧ ಸೊಪ್ಪು, ತರಕಾರಿ ಬೆಳೆಗಳನ್ನು ಬೆಳೆಯುತ್ತಾ, ಪ್ರತಿನಿತ್ಯ ಬೆಂಗಳೂರು, ಮೈಸೂರು ಮತ್ತು ರಾಮನಗರ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ. ಅಲ್ಲದೇ ಸಾವಿರ ಎಕರೆಯಲ್ಲಿ ರಾಗಿ, ಅವರೆ, ತೊಗರಿ, ಹುರುಳಿ, ಅಲಸಂಡೆ ಬೆಳೆ ಬೆಳೆಯುತ್ತಾರೆ. ಜತೆಗೆ ಸಣ್ಣ ರೈತರು ಕೋಳಿ, ಕುರಿ, ಮೇಕೆ, ಕೃಷಿ ಹೊಂಡದ ಮೂಲಕ ಮೀನು ಸಾಕಣೆೆ, ಅಡಿಕೆ ಹಾಳೆ ತಟ್ಟೆ(ಪ್ಲೇಟ್) ತಯಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಸರಿಸುಮಾರು 40ರಿಂದ 50 ಸಾವಿರಕ್ಕೂ ಹೆಚ್ಚು ಸೀಮೆಹಸು, ದನ-ಕರುಗಳನ್ನು ಹೊಂದಿರುವ ಈ ಹಳ್ಳಿಗಳಲ್ಲಿ ಪ್ರತೀ ತಿಂಗಳಿಗೆ ಕನಿಷ್ಠ 6 ಲಕ್ಷಕ್ಕೂ ಅಧಿಕ ಲೀಟರ್‌ನಷ್ಟು ಹಾಲನ್ನು ಬೆಂಗಳೂರು ಡೈರಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು 'ಹಾಲು ಉತ್ಪಾದಕರ ಸಹಕಾರ ಸಂಘ' ಮಾಹಿತಿ ನೀಡಿದೆ.

ಈ ಮೇಲ್ಕಂಡ ಭೂಮಿಯಲ್ಲಿ ಪೂರ್ವ ದಿಕ್ಕಿನಲ್ಲಿ ಸುವರ್ಣಮುಖಿ, ಪಶ್ಚಿಮ ದಿಕ್ಕಿನಲ್ಲಿ ವೃಷಭಾವತಿ ನದಿ ಹರಿಯುತ್ತಿರುವುದರಿಂದ ಈ ಭಾಗದ ಜಮೀನು ಸಂಪೂರ್ಣವಾಗಿ ನೀರಾವರಿಯಿಂದ ಕೂಡಿದ್ದು, ಮಲೆನಾಡನ್ನು ಮೀರಿಸುವ ಹಂತದಲ್ಲಿದೆ ಎಂಬುದು ಆ ವ್ಯಾಪ್ತಿಯಲ್ಲಿ ಸ್ಥಳಗಳಿಗೆ ಭೇಟಿ ನೀಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ರಾಜ್ಯ ಸರಕಾರ 'ಟೌನ್‌ಶಿಪ್ ಯೋಜನೆ' ಎಂದು ಹೆಸರಿನಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ.ವ್ಯಾಪ್ತಿಯ 5 ಸಾವಿರಕ್ಕೂ ಅಧಿಕ ರೈತ ಕುಟುಂಬಗಳ ಬದುಕಿಗೆ ಆಸರೆಯಾಗಿರುವ ಕೃಷಿ ಭೂಮಿ, ಜೀವ ವೈವಿಧ್ಯಗಳನ್ನು ನಾಶ ಮಾಡಲು ಹೊರಟಿರುವುದು ಸ್ಥಳೀಯ ರೈತರು ಮತ್ತು ಗ್ರಾಮಸ್ಥರ ಬದುಕಿನ ಮೇಲಿನ ನೇರ ದಾಳಿಯಾಗಿದೆ ಎಂದು ರೈತ ಹೋರಾಟಗಾರ ಟಿ.ಯಶವಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಆಸ್ತಿಯಲ್ಲ, ನಮ್ಮ ಬದುಕು: 'ನಮ್ಮ ಜಮೀನು ಕೇವಲ ಆಸ್ತಿಯಲ್ಲ, ಅದು ನಮ್ಮ ಬದುಕು'. ಭೂಮಿ ಕಳೆದುಕೊಂಡ ನಂತರ ಸಿಗುವ ಪರಿಹಾರದ ಹಣ ಕೆಲ ವರ್ಷಗಳು ಮಾತ್ರ. ಆದರೆ ಬದುಕಿನ ಆಧಾರವೇ ಕಳೆದುಹೋದರೆ ಮುಂದಿನ ಪೀಳಿಗೆಯ ಸ್ಥಿತಿ ಏನು?. ಜನರನ್ನು ಬಲಿಕೊಡುವ ಅಭಿವೃದ್ಧಿ ನಮಗೆ ಯಾವುದೇ ಕಾರಣಕ್ಕೂ ಬೇಕಾಗಿಲ್ಲ.

ಅಲ್ಲದೆ, ಬಿಡದಿ ಸುತ್ತಮುತ್ತ ಇರುವ ಕೆರೆಗಳು, ಹಸಿರು ಪ್ರದೇಶಗಳು ಮತ್ತು ಭೂಗರ್ಭದಲ್ಲಿನ ಜಲ ಸಂಪತ್ತಿನ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ. ದೊಡ್ಡಮಟ್ಟದ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣದಿಂದ ನೀರಿನ ಬೇಡಿಕೆ, ವಾಹನ ದಟ್ಟಣೆ ಮತ್ತು ಮಾಲಿನ್ಯ ಹೆಚ್ಚುವ ಸಾಧ್ಯತೆ ಇದೆ' ಎಂದು ರೈತ ಹೋರಾಟಗಾರ್ತಿ ಶಾಂಭವಿ ಆತಂಕ ವ್ಯಕ್ತಪಡಿಸಿದರು. 'ಬಿಡದಿ ಟೌನ್‌ಶಿಪ್ ವಿಚಾರವು ಕೇವಲ ಒಂದು ಅಭಿವೃದ್ಧಿ ಯೋಜನೆಯ ಪ್ರಶ್ನೆಯಾಗಿರದೆ, ರೈತರ ಹಕ್ಕು, ಪರಿಸರ ಸಂರಕ್ಷಣೆ ಮತ್ತು ಸರಕಾರದ ಅಭಿವೃದ್ಧಿ ಮಾದರಿಯ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಚರ್ಚೆಯ ಭಾಗವಾಗಿದೆ. ಒಂದು ಕಡೆ ಸರಕಾರಕ್ಕೆ ನಗರೀಕರಣದ ಕನಸು ಇದ್ದರೆ, ರೈತರಿಗೆ ಮಣ್ಣಿನ ಜೊತೆ ಬೆಸೆದುಕೊಂಡಿರುವ ಬದುಕಿನ ಪ್ರಶ್ನೆಯಾಗಿದೆ.

ಆದುದರಿಂದ ರೈತರ ಪರ ಎಂದು ಹೇಳುವ ಸರಕಾರ ಕೂಡಲೇ ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಟ್ಟು, ರೈತ ಪರ ನಿಲುವುಗಳನ್ನು ತೆಗೆದುಕೊಳ್ಳಬೇಕು' ಎಂದು ರೈತ ಮುಖಂಡ ನಾಗರಾಜು ಆಗ್ರಹವಾಗಿದೆ.

ಯೋಜನೆ ವ್ಯಾಪ್ತಿಯ ಗ್ರಾಮಗಳು

ಬೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಅಂಚೀಪುರ, ಅಂಚೀಪುರ ಕಾಲನಿ, ಮೆರವೇಗೌಡನದೊಡ್ಡಿ, ಚಿಕ್ಕ ಬೈರಮಂಗಲ, ಕೋಡಿಹಳ್ಳಿ, ಕೆಂಪಶೆಟ್ಟಿದೊಡ್ಡಿ, ಮಠದ ಬಯಲು, ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಾಲ್, ಕೆಂಪಯ್ಯನಪಾಳ್ಯ, ತಾಯಪ್ಪನದೊಡ್ಡಿ, ಅರಲಾಳುಸಂದ್ರ, ಸಿದ್ದಯ್ಯನದೊಡ್ಡಿ, ಮನಗನಹಳ್ಳಿ, ಅಂಗರಪಾಳ್ಯ, ಕರಿಕಲ್ಲುದೊಡ್ಡಿ, ನಿಂಗಪ್ಪದೊಡ್ಡಿ, ಹೊಸೂರು, ಗೊಲ್ಲಹಳ್ಳಿ, ಕೆ.ಜಿ.ಗೊಲ್ಲರಪಾಳ್ಯ, ಕೋಡಿದೊಡ್ಡಿಪಾಳ್ಯ, ನಂಜೇಗೌಡನದೊಡ್ಡಿ, ವಡೇರಹಳ್ಳಿ.

ಜನ ಛೀ ಥೂ ಎನ್ನುವ ಮೊದಲೇ ಯೋಜನೆ ಕೈಬಿಡಿ

ಬೆಂಗಳೂರು ಅಭಿವೃದ್ಧಿ ಹೊಂದಿದರೆ ಇಡೀ ಕರ್ನಾಟಕವೇ ಅಭಿವೃದ್ಧಿಯಾದಂತೆ ಎಂದು ತಿಳಿದುಕೊಳ್ಳುವುದು ಮೂರ್ಖತನ. ಯೋಜನೆ ರೂಪಿಸುವ ಅಧಿಕಾರಿಗಳಿಗೆ 'ಅಭಿವೃದ್ಧಿ'ಯ ಆಲೋಚನೆಯೇ ಇಲ್ಲ. ಅಭಿವೃದ್ಧಿ ಎಂದರೆ ಕಾಂಕ್ರಿಟ್ ರಸ್ತೆಗಳು, ದೊಡ್ಡದೊಡ್ಡ ಕಟ್ಟಡಗಳು ಮಾತ್ರ ಎಂದು ತಿಳಿದುಕೊಂಡಿದ್ದಾರೆ. ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಪಂಚಾಯತ್ ಸೇರಿದಂತೆ ಬಿಡದಿ ಸುತ್ತಮುತ್ತಲಿನ ಪ್ರದೇಶವು ಬೆಂಗಳೂರಿನ ಮಲೆನಾಡು ಇದ್ದಂತೆ. ಅಂತಹ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಸರಕಾರ ಜನ ಛೀ, ಥೂ ಎಂದು ಉಗಿಯುವ ಮೊದಲೇ ಯೋಜನೆ ಕೈ ಬಿಡಬೇಕು. ಈಗಾಗಲೇ ಅಲ್ಲಿನ ರೈತರು ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ಸಂಯುಕ್ತ ಹೋರಾಟ-ಕರ್ನಾಟಕ ಬೆಂಬಲ ಸೂಚಿಸುತ್ತದೆ. ಹಠ ಮಾಡಿ ಯೋಜನೆ ಮುಂದುವರಿಸಿದ್ದೇ ಆದಲ್ಲಿ ದೇವನಹಳ್ಳಿಯ ಮುಂದುವರಿದ ಹೋರಾಟ ಇದಾಗುತ್ತದೆ.

-ಬಡಗಲಪುರ ನಾಗೇಂದ್ರ, ಸಂಯೋಜಕ, ಸಂಯುಕ್ತ ಹೋರಾಟ ಕರ್ನಾಟಕ

ಕಾಂಕ್ರಿಟ್ ಭೂಮಿಯಲ್ಲಿ ಆಹಾರ ಬೆಳೆಯಲು ಸಾಧ್ಯವೇ?

ಅಭಿವೃದ್ದಿ ನೆಪದಲ್ಲಿ ರೈತರ ಭೂಮಿ ವಶಪಡಿಸಿಕೊಂಡು ಅಲ್ಲಿ ಭೂಮಿ 'ಕಾಂಕ್ರಿಟ್ ಕಾಡು' ಮಾಡುವುದರಿಂದ ಜನರಿಗೆ ಆಹಾರ ಬೆಳೆಯಲು ಸಾಧ್ಯವೇ?. ಆಹಾರದ ಸ್ವಾವಲಂಬನೆ, ಸ್ವಾತಂತ್ರ್ಯ ಬದುಕು, ಸಂಸ್ಕೃತಿಯನ್ನು ನಾಶ ಮಾಡುವುದು ಅಭಿವೃದ್ಧಿ ಹೇಗಾಗುತ್ತದೆ?. ಕೃಷಿ, ಜನರ ಬದುಕಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಬದಲು ಲಕ್ಷಾಂತರ ಜನರ ಬದುಕನ್ನು ಬೀದಿಪಾಲು ಮಾಡುವ ಈ ರೀತಿಯ ಯೋಜನೆಗಳು ಬೇಡ.

-ಕುಮಾರ್ ಸಮತಳ, ಸಂಚಾಲಕ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

Dailyhunt
Disclaimer: This content has not been generated, created or edited by Dailyhunt. Publisher: Varthabharathi