ಜಕಾರ್ತ, ಜು. 7: ಭಾರತ ಮತ್ತು ಇಂಡೋನೇಶ್ಯ ಮಂಗಳವಾರ ಬ್ರಹ್ಮೋಸ್ ಮತ್ತು ಅಸ್ತ್ರ ಕ್ಷಿಪಣಿಗಳ ಪೂರೈಕೆ ಹಾಗೂ ಖನಿಜ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಮೂರು ದೇಶಗಳ ಪ್ರವಾಸಕ್ಕೆ ತೆರಳಿದ್ದು, ಇಂಡೋನೇಶ್ಯ ಅವರ ಮೊದಲ ನಿಲ್ದಾಣವಾಗಿದೆ.
ಇದರ ನಂತರ ಅವರು ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್‌ಗೆ ಭೇಟಿ ನೀಡಲಿದ್ದಾರೆ.
ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ಹಾಗೂ ತಂತ್ರಜ್ಞಾನ ಮತ್ತು ಅಪರೂಪದ ಖನಿಜ ಕ್ಷೇತ್ರದಲ್ಲಿ ಸಹಯೋಗ ಏರ್ಪಡಿಸುವುದು ಹಾಗೂ ಆ ಮೂಲಕ ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ವೃದ್ಧಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಜಕಾರ್ತದ ಮೆರ್ಡೆಕಾ ಅಧ್ಯಕ್ಷೀಯ ಅರಮನೆಯಲ್ಲಿ ಅಧ್ಯಕ್ಷ ಪ್ರಬೊವೊ ಸುಬಿಯಂಟೊ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಜಂಟಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮೋದಿ, ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪರಸ್ಪರ ವಿಶ್ವಾಸವು ರಕ್ಷಣೆ, ಭದ್ರತೆ ಮತ್ತು ಕಡಲ ವಲಯದಲ್ಲಿನ ಸಹಕಾರವನ್ನು ಬಲಪಡಿಸಿದೆ ಎಂದರು.
ಇಂಡೋನೇಶ್ಯದ ಸಶಸ್ತ್ರ ಪಡೆಗಳಿಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಮತ್ತು ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಅಸ್ತ್ರ ಕ್ಷಿಪಣಿಗಳನ್ನು ಪೂರೈಸುವ ಒಪ್ಪಂದಗಳನ್ನು ಈ ಜಂಟಿ ಮಾಧ್ಯಮ ಸಂವಾದದಲ್ಲಿ ಘೋಷಿಸಲಾಯಿತು.
ಭಾರತ-ರಷ್ಯಾ ಜಂಟಿ ಉದ್ಯಮ 'ಬ್ರಹ್ಮೋಸ್ ಏರೋಸ್ಪೇಸ್', ಇಂಡೋನೇಶ್ಯದ ರಕ್ಷಣಾ ಸಚಿವಾಲಯದೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದೇ ವೇಳೆ, ಭಾರತದ ಸರಕಾರಿ ಸ್ವಾಮ್ಯದ 'ಭಾರತ್ ಡೈನಾಮಿಕ್ಸ್ ಲಿಮಿಟೆಡ್' ಸಂಸ್ಥೆಯು ಅಸ್ತ್ರ ಕ್ಷಿಪಣಿಗಳ ಪೂರೈಕೆಗಾಗಿ ಇಂಡೋನೇಶ್ಯದ ಪ್ರಮುಖ ಖಾಸಗಿ ರಕ್ಷಣಾ ಕಂಪೆನಿ 'ರೆಪಬ್ಲಿಕಾರ್ಪ್' ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

