ಮೈಸೂರು : ಬ್ರಿಟಿಷರು ಮತ್ತು ಅಂಬೇಡ್ಕರ್ ಅವರ ಸಹಾಯದಿಂದ ಭಾರತದಲ್ಲಿ ಬುದ್ದ ಮತ್ತೆ ಪ್ರಚಲಿತಕ್ಕೆ ಬಂದ ಎಂದು ಚಿಂತಕ ಹಾಗೂ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಇನ್‌ಸ್ಟ್ಟಿಟ್ಯೂಟ್ ಅಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಗುರುವಾರ ಲಡಾಯಿ ಪ್ರಕಾಶನ ಗದಗ, ದಲಿತ ಸಂಘರ್ಷ ಸಮಿತಿ ಮೈಸೂರು, ಮೈಸೂರು ವಿವಿ ಸಂಶೋಧಕ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ಬುದ್ಧ ಧಮ್ಮ ಮತ್ತು ಸಮಾಜ ಸುಧಾರಕರು ಹಾಗೂ ಬುದ್ಧ ಧಮ್ಮ ಮತ್ತು ಮಹಿಳೆ ಪುಸ್ತಕ ಬಿಡುಗಡೆಗೊಳಿಸಿ ನಂತರ ಅವರು ಮಾತನಾಡಿದರು.
ಬುದ್ಧನ ನಂತರ ಬೌದ್ಧ ಧಮ್ಮ ಸಾವಿರ ವರ್ಷಗಳ ಭಾರತದ ಪ್ರಮುಖ ಧರ್ಮವಾಗಿತ್ತು. ಬೌದ್ಧ ಧಮ್ಮ ನಾಶವನ್ನು ಮುಸಲ್ಮಾನರ ಮೇಲೆ ಹಾಕಲಾಯಿತು. ಆದರೆ ಬ್ರಾಹ್ಮಣ ವಾದದ ಹಗೆತನ ಮತ್ತು ಹಿಂಸಾತ್ಮಕ ರಾಜಕಾರಣ ಅದನ್ನು ನಾಶ ಮಾಡಲು ಪ್ರಯತ್ನಿಸಿತು ಎಂದು ಹೇಳಿದರು.
ಬೌದ್ಧ ಧಮ್ಮ ವೈಜ್ಞಾನಿಕವಾದದ್ದು, ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಂದು ಪ್ರಪಂಚದ ಅನೇಕ ಕಡೆ ಯುದ್ಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬುದ್ಧ ಪ್ರಸ್ತುತನಾಗುತ್ತಾನೆ. ಅದಕ್ಕಾಗಿಯೇ ಎಲ್ಲರಿಗೂ ಬುದ್ಧ ಬೇಕು ಎಂದರು.
ಬಸವಣ್ಣ ಅವರು ಮತ್ತೊಂದು ಧರ್ಮವನ್ನು ಹುಟ್ಟು ಹಾಕಿದರಾದರೂ ಅವರು ಸಹ ಬುದ್ಧ ತತ್ವವನ್ನೇ ಅನುಸರಿಸಿದ್ದಾರೆ. ಕಳಬೇಡ ಕೊಲಬೇಡ, ಹುಸಿಯ ನುಡಿಯಲೂ ಬೇಡ ಎಂದು ಬಸವಣ್ಣ ಅವರು ಹೇಳಿರುವುದು ಬುದ್ಧನ ಪರಿಕಲ್ಪನೆಯಲ್ಲೇ, ವಚನಕಾರರಿಗೂ ಬುದ್ಧ ಧಮ್ಮ ಸಿಕ್ಕಿತ್ತು ಎನ್ನುವುದಕ್ಕೆ ಅವರ ಬರವಣಿಗೆಗಳೇ ಸಾಕ್ಷಿ ಎಂದು ಎಂದು ಹೇಳಿದರು.
ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಚ.ಹ.ರಘುನಾಥ್ ಪುಸ್ತಕ ಪರಿಚಯ ಮಾಡಿಕೊಟ್ಟರು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮುಖ್ಯ ಅತಿಥಿಗಳಾಗಿದ್ದರು.ಕುಮಾರ್ ಆರ್.ಕೀರ್ತಿ ಎಸ್.ಬೈಂದೂರು, ದೀಪಾ ಬುದ್ಧೆ ಪುಸ್ತಕ ಓದಿನ ಅನುಭವ ಹಂಚಿಕೊಂಡರು.
ಲೇಖಕಿ ಡಾ.ಎಚ್.ಎಸ್.ಅನುಪಮಾ, ಲಡಾಯಿ ಪ್ತಕಾಶನದ ಬಸವರಾಜ ಸೂಳಿಭಾವಿ, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಲಿತ ವಿದ್ಯಾರ್ಥಿ ಒಕ್ಕೂಟದ ಗಜೇಂದ್ರ ಚಿನ್ನಸ್ವಾಮಿ ಉಪಸ್ಥಿತರಿದ್ದರು. ಲೇಖಕ ಅವಿನಾಶ್ ಟಿಜಿಎಸ್ ಸ್ವಾಗತಿಸಿದರು.

