Dailyhunt
Budget Session 2026 | ಜಯಂತಿಗಳಲ್ಲಿ ಡಿಜೆ ನಿಷೇಧಕ್ಕೆ ಸಚಿವ ಪಟ್ಟು: ವಿಧಾನಸಭೆಯಲ್ಲಿ ಮಾತಿನ ಚಕಮಕಿ

Budget Session 2026 | ಜಯಂತಿಗಳಲ್ಲಿ ಡಿಜೆ ನಿಷೇಧಕ್ಕೆ ಸಚಿವ ಪಟ್ಟು: ವಿಧಾನಸಭೆಯಲ್ಲಿ ಮಾತಿನ ಚಕಮಕಿ

ಬೆಂಗಳೂರು : ರಾಜ್ಯದಲ್ಲಿ ಆಚರಿಸುತ್ತಿರುವ ಎಲ್ಲ ಜಯಂತಿಗಳಲ್ಲಿ ಡಿಜೆ, ಅಶ್ಲೀಲ ನೃತ್ಯ(ಐಟಂ ಸಾಂಗ್) ಕಡ್ಡಾಯವಾಗಿ ನಿಷೇಧಿಸಿ ಎಂದು ಸಚಿವ ಸಂತೋಷ್‌ ಲಾಡ್ ಆಗ್ರಹ ವಿಚಾರವು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುವ ಉತ್ಸವಗಳಿಗೆ ಅನುದಾನ ವಿಚಾರವಾಗಿ ಕೇಳಿದ ಪ್ರಶ್ನೆಯ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಚಿವ ಸಂತೋಷ್‌ ಲಾಡ್, ʼಎಲ್ಲ ಜಯಂತಿಗಳಲ್ಲಿ ಡಿಜೆ ಬಹಳ ದೊಡ್ಡ ಸಮಸ್ಯೆ ಆಗಿದೆ.

ರಾಜಕೀಯವಾಗಿ ಈ ಬಗ್ಗೆ ವಿಚಾರ ಮಾಡಬೇಕು. ಯಾವುದೇ ಜಯಂತಿಗಳಲ್ಲಿ ಡಿಜೆಗಳಲ್ಲಿ, ಅಶ್ಲೀಲ ನೃತ್ಯ ಇಲ್ಲದೆ ದೇವರ ಮುಂದೆ ಹೋಗಲ್ಲ. ಇದು ಯಾವುದೇ ಸಂಸ್ಕೃತಿಗೆ ಒಳ್ಳೆಯದಲ್ಲʼ ಎಂದು ಸದನದ ಗಮನ ಸೆಳೆದರು.

ಇದನ್ನು ಬೆಂಬಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಇದೊಂದು ಉತ್ತಮವಾದ ಸಲಹೆಯಾಗಿದೆ. ಬಿಜೆಪಿ ನಾಯಕರು ಇದಕ್ಕೆ ಸ್ವಲ್ಪ ಸಹಕಾರ ಮಾಡಬೇಕು. ಎಲ್ಲರೂ ಒಪ್ಪಿಗೆ ನೀಡಿದರೆ ನಾವು ಆದೇಶ ಹೊರಡಿಸುತ್ತೇವೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶ ಮಾಡಿ, ನಮ್ಮಲ್ಲಿ ಡಿಜೆ ಸಂಸ್ಕೃತಿ ಇರಲಿಲ್ಲ. ಡಿಜೆ ಸಂಸ್ಕೃತಿ ಈಗ ಹುಟ್ಟಿದ್ದು. ಡಿಜೆಗಳಲ್ಲಿ ಹಾಕುವ ಹಾಡುಗಳ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹೊರತು ಭಜನೆ ಪದ್ಯಕ್ಕೆ ಯಾರೂ ಬೇಡ ಎನ್ನುತ್ತಿಲ್ಲ ಎಂದು ಉಲ್ಲೇಖಿಸಿದರು.

ಈ ವೇಳೆ ಬಿಜೆಪಿ ಸದಸ್ಯ ಚನ್ನಬಸಪ್ಪ (ಚೆನ್ನಿ) ಆಕ್ಷೇಪ ವ್ಯಕ್ತಪಡಿಸಿ, ಡಿಜೆ ಮಾತ್ರ ಏಕೆ? ಸುಪ್ರೀಂ ಕೋರ್ಟ್ ಆದೇಶದಲ್ಲಿ ಆಝಾನ್ ಧ್ವನಿವರ್ಧಕ ನಿಷೇಧ ಮಾಡಿ ಎಂದಿದೆ. ಇದನ್ನು ಮಾಡುವಿರಾ ಎಂದು ಸವಾಲು ಹಾಕಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಖಾದರ್, ಸುಪ್ರೀಂ ಕೋರ್ಟ್ ಆದೇಶ ಶಬ್ಧದ ಪ್ರಮಾಣಕ್ಕೆ ಸಂಬಂಧಿಸಿದಂತದ್ದು. ಸರಕಾರ ಆದೇಶ ಮಾಡಿದರೆ ಅದನ್ನು ಪಾಲನೆ ಮಾಡಬೇಕು ಎಂದರು.

ಡಿಜೆ ಶಬ್ಧದಿಂದಲೇ ಹೃದ್ರೋಗ.: ಡಿಜೆ ಶಬ್ಧ ಹೃದ್ರೋಗ ಸಮಸ್ಯೆ ಇರುವವರಿಗೆ ಹಾಗೂ ಫೇಸ್ ಮೇಕರ್ ಹಾಕಿದವರಿಗೆ ತುಂಬಾ ತೊಂದರೆ ಆಗುತ್ತಿದೆ. ಎಳೆಯ ಮಕ್ಕಳು ಕಿವಿ ಮುಚ್ಚಿಕೊಳ್ಳುತ್ತಾರೆ. ಪೊಲೀಸರು ನಿಸ್ಸಾಹಕರಾಗಿದ್ದಾರೆ. ಡಿಜೆ ಶಬ್ಧ ಮಾಲಿನ್ಯ ಹಾಗೂ ದುಷ್ಪರಿಣಾಮದ ಬಗ್ಗೆ ಗಂಭೀರ ಚರ್ಚೆ ಆಗಬೇಕು ಎಂದು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಆಗ್ರಹಿಸಿದರು. ಆಗ ಸ್ಪೀಕರ್ ಯು.ಟಿ.ಖಾದರ್, ಈ ಕುರಿತ ಚರ್ಚೆಗೆ ಸಮಯ ನೀಡಲಾಗುವುದು ಎಂದು ಪ್ರಕಟಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi