ಚಾಮರಾಜನಗರ : ಹುಲಿಗಾಗಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಪಡಗೂರು ಗ್ರಾಮದ ರೈತ ಮಹಾದೇವಸ್ವಾಮಿ ಎಂಬವರ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ಸೆರೆ ಸಿಕ್ಕ ಚಿರತೆ ಅಂದಾಜು 4 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ.
ಕಳೆದ ಹಲವು ದಿನಗಳಿಂದ ಪಡಗೂರು ಸುತ್ತಮುತ್ತಲು ರೈತರು ಹುಲಿ ಆತಂಕದಲ್ಲಿದ್ದರು. ತುಮಕೂರು ಮಾದರಿಯಲ್ಲಿ ಬೋನಿಟ್ಟು ಕರುವೊಂದನ್ನು ಕಟ್ಟಿಹಾಕಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಸದ್ಯ ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಅರಣ್ಯ ಇಲಾಖೆ ಬಿಟ್ಟಿದೆ. ಚಿರತೆ ಸೆರೆಯಾಗಿದೆ ಆದರೆ ಹುಲಿ ಆತಂಕ ಇನ್ನೂ ಇದ್ದು ಅರಣ್ಯ ಇಲಾಖೆಯು ಕೂಡಲೇ ಹುಲಿ ಸೆರೆಗೆ ಕ್ರಮವಹಿಸಬೇಕೆಂದು ರೈತ ಮುಖಂಡ ಪಡಗೂರು ಶಿವಕುಮಾರ್ ಆಗ್ರಹಿಸಿದ್ದಾರೆ.

