Dailyhunt Logo
  • Light mode
    Follow system
    Dark mode
    • Play Story
    • App Story
ಚಂಡೀಗಢ ಕ್ಯಾಷಿಯರ್ ಹತ್ಯೆ ಪ್ರಕರಣ: ಸ್ಪೇನ್ ನಲ್ಲಿ ಲಾರೆನ್ಸ್ ಬಿಷ್ಣೋಯಿ ಆಪ್ತ ಗೋಲ್ಡಿ ಧಿಲ್ಲೋನ್ ಬಂಧನ

ಚಂಡೀಗಢ ಕ್ಯಾಷಿಯರ್ ಹತ್ಯೆ ಪ್ರಕರಣ: ಸ್ಪೇನ್ ನಲ್ಲಿ ಲಾರೆನ್ಸ್ ಬಿಷ್ಣೋಯಿ ಆಪ್ತ ಗೋಲ್ಡಿ ಧಿಲ್ಲೋನ್ ಬಂಧನ

ಮ್ಯಾಡ್ರಿಡ್, ಜು. 4: ಚಂಡೀಗಢದ ಔಷಧ ಅಂಗಡಿಯ ಕ್ಯಾಷಿಯರ್ ಹತ್ಯೆ ಪ್ರಕರಣದ ಶಂಕಿತ ಸೂತ್ರಧಾರಿ ಹಾಗೂ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಪ್ರಮುಖ ಸಹಚರ ಎಂದು ಶಂಕಿಸಲಾಗಿರುವ ಗೋಲ್ಡಿ ಧಿಲ್ಲೋನ್‌ ನನ್ನು ಸ್ಪೇನ್ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ವರದಿಯಾಗಿದೆ.

ಪಂಜಾಬ್ ಭೂಗತ ಪಾತಕಿಗಳ ನಿಗ್ರಹ ಕಾರ್ಯಪಡೆ (ಎಜಿಟಿಎಫ್‌) ನೀಡಿದ ಖಚಿತ ಸುಳಿವಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಚಂಡೀಗಢದ ಸೆಕ್ಟರ್-11ರಲ್ಲಿರುವ ಶ್ರೀ ಕುಮಾರ್ ಮೆಡಿಕಲ್ ಹಾಲ್‌ನ 45 ವರ್ಷದ ಕ್ಯಾಷಿಯರ್ ಜಾನಕಿ ದಾಸ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡಿ ಧಿಲ್ಲೋನ್ ವಿರುದ್ಧ ಆರೋಪ ಕೇಳಿಬಂದಿದೆ. ಜೂನ್ 13ರಂದು ಹಗಲಿನ ವೇಳೆ ನಡೆದ ಈ ಹತ್ಯೆಯ ಸಂಚು ರೂಪಿಸಿದ್ದ ಆರೋಪವನ್ನು ಆತ ಎದುರಿಸುತ್ತಿದ್ದಾನೆ.

ಜೂನ್ 13ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಮೋಟಾರ್ ಬೈಕ್‌ನಲ್ಲಿ ಮಾರುಕಟ್ಟೆ ಸಮುಚ್ಚಯಕ್ಕೆ ಆಗಮಿಸಿದ್ದ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳ ಪೈಕಿ, ಮುಸುಕು ಧರಿಸಿದ್ದ ಇಬ್ಬರು ಔಷಧ ಅಂಗಡಿಗೆ ಪ್ರವೇಶಿಸಿದ್ದರು. ಮೂರನೇ ವ್ಯಕ್ತಿಯು ಅಂಗಡಿಯ ಹೊರಭಾಗದಲ್ಲಿ ನಿಂತು ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ವಹಿಸುತ್ತಿದ್ದ ಎಂದು ಚಂಡೀಗಢ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿಕೋರರು ನೇರವಾಗಿ ಕೌಂಟರ್ ಬಳಿ ತೆರಳಿ, ಅತ್ಯಂತ ಸಮೀಪದಿಂದ ಕ್ಷಿಪ್ರವಾಗಿ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾನಕಿ ದಾಸ್ ಅವರನ್ನು ತಕ್ಷಣವೇ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್‌) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಬಳಿಕ ನಡೆದ ತನಿಖೆಯಲ್ಲಿ, ಈ ದಾಳಿಯ ಶಂಕಿತ ಸೂತ್ರಧಾರಿಯಾಗಿ ಗೋಲ್ಡಿ ಧಿಲ್ಲೋನ್‌ ನನ್ನು ಪೊಲೀಸರು ಗುರುತಿಸಿದ್ದರು.

ಗೋಲ್ಡಿ ಧಿಲ್ಲೋನ್ ಭಾರತದಿಂದ ಹೊರಗಡೆ ನೆಲೆಸಿಕೊಂಡು ತನ್ನ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಅಲ್ಲದೆ, ಆತ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಅಪರಾಧ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತುಗಳ ಜಾಲ ನಿರ್ವಹಣೆ ಹಾಗೂ ಗುರಿಯಾಗಿಸಿಕೊಂಡು ನಡೆಸಲಾದ ಹತ್ಯೆ ಪ್ರಕರಣಗಳು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಆತ ಹಲವು ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi