Monday, 01 Mar, 12.06 am ವಾರ್ತಾಭಾರತಿ

ರಾಷ್ಟೀಯ
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ: ವರದಿ ಸಲ್ಲಿಸಲು ಸಮಿತಿ ರಚಿಸಿದ ಗ್ರೀನ್‌ಕೋರ್ಟ್

ಹೊಸದಿಲ್ಲಿ, ಫೆ.28: ಕರ್ನಾಟಕದ ಚಿಕ್ಕಬಳ್ಳಾಪುರದ ಗಣಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವ ನಿಟ್ಟಿನಲ್ಲಿ 6 ಸದಸ್ಯರ ಸಮಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದೆ.

ಸ್ಫೋಟದ ಬಗ್ಗೆ ಮಾಧ್ಯಮಗಳ ವರದಿಯನ್ನು ಗಮನಿಸಿದ ಎನ್‌ಜಿಟಿ ಅಧ್ಯಕ್ಷ ನ್ಯಾ ಎಕೆ ಗೋಯೆಲ್ ನೇತೃತ್ವದ ನ್ಯಾಯಪೀಠವು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಗಣಿ ಇಲಾಖೆಯ ನಿರ್ದೇಶಕರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೋಟಿಸ್ ಜಾರಿಗೊಳಿಸಿದೆ.

ಜೊತೆಗೆ, ಸ್ಫೋಟದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವ ನಿಟ್ಟಿನಲ್ಲಿ 6 ಸದಸ್ಯರ ಜಂಟಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್, ಕರ್ನಾಟಕದ ಗಣಿಗಾರಿಕೆ ಇಲಾಖೆಯ ನಿರ್ದೇಶಕರು, ಸ್ಫೋಟಕಗಳ ಮುಖ್ಯ ನಿಯಂತ್ರಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸೂಚಿಸಲಾಗಿದೆ.

ಸ್ಫೋಟ ನಡೆದ ಸ್ಥಳಕ್ಕೆ ಮುಂದಿನ ವಾರದೊಳಗೆ ಸಮಿತಿ ಭೇಟಿ ನೀಡಲಿದೆ. ಜೊತೆಗೆ ಆನ್‌ಲೈನ್‌ನಲ್ಲಿ ಕಾರ್ಯಕಲಾಪ ಮುಂದುವರಿಸಲು ಸಮಿತಿಗೆ ಮುಕ್ತಾವಕಾಶವಿದೆ. ಇತರ ಯಾವುದೇ ತಜ್ಞರ/ಸಂಘಟನೆಗಳ ನೆರವು ಪಡೆಯಲೂ ಸಮಿತಿಗೆ ಮುಕ್ತ ಅವಕಾಶವಿದೆ. ಸ್ಫೋಟದ ಬಗ್ಗೆ ತನಿಖೆ ನಡೆಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ನ್ಯಾಯಪೀಠ ಹೇಳಿದೆ.

ಫೆಬ್ರವರಿ 22ರಂದು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೆನಾಗವಳ್ಳಿ ಗ್ರಾಮದ ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 6 ಜನ ಮೃತಪಟ್ಟಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top