ಹೊಸದಿಲ್ಲಿ, ಆ.14: ಡೆಲ್ಟಾ ಪ್ರಭೇದದ ಕೊರೋನ ವೈರಸ್ನ ಹಾವಳಿ ಚೀನಾದಲ್ಲಿ ಮತ್ತೆ ತಲೆದೋರಿದ್ದು, ಮಂಗಳವಾರ 59 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ನಿನ್ನೆಗಿಂತ 22ರಷ್ಟು ಅಧಿಕವಾಗಿದೆ. ಈ ಎಲ್ಲಾ ಪ್ರಕರಣಗಳು ಫ್ಯೂಜಿಯಾನ್ನಿಂದಲೇ ವರದಿಯಾಗಿವೆ.
ಆಗ್ನೇಯ ಚೀನಾ ಪ್ರಾಂತವಾದ ಫ್ಯೂಜಿಯಾನ್ನಲ್ಲಿ ಡೆಲ್ಟಾ ಪ್ರಭೇದದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಎರಡುಪಟ್ಟು ಏರಿಕೆಯಾಗಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಚೀನಾ ಹರಸಾಹಸ ನಡೆಸುತ್ತಿದೆ.
ಫ್ಯೂಜಿಯಾನ್ ಪ್ರಾಂತದ 30.2 ಲಕ್ಷ ಜನಸಂಖ್ಯೆಯ ಪುತಿಯಾನ್ ನಗರದಲ್ಲಿ ಮೊದಲ ಡೆಲ್ಟಾ ವೈರಸ್ ಸೋಂಕು ಪ್ರಕರಣ ವರದಿಯಾಗಿತ್ತು. ಕ್ಸಿಯಾಮೆನ್ ಪ್ರಾಂತದಿಂದ ದಕ್ಷಿಣ ಪ್ರಾಂತಗಳಿಗೆ ಈ ವೈರಸ್ ಹರಡುತ್ತಿದೆಯೆಂದು ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.
ಡೆಲ್ಟಾ ಪ್ರಭೇದದ ಕೊರೋನ ವೈರಸ್ನ ಹಡುವಿಕೆಯು ಪುತಿಯಾನ್ ನಗರದ ಪ್ರಾಥಮಿಕ ಶಾಲೆಯೊಂದರಲ್ಲಿ ಆರಂಭಗೊಂಡಿರಬೇಕೆಂದು ಆರೋಗ್ಯಾಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ನಗರದ ಶಾಲೆಗಳನ್ನು ಮುಚ್ಚುಗಡೆಗೊಳಿಸಲಾಗಿದ್ದು, ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ.

