ಸುಲ್ತಾನ್ಪುರ (ಉತ್ತರ ಪ್ರದೇಶ), ನ. 24: 2021ರ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿಸಂಹಿತೆ ಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ದಾಖಲಾಗಿದ್ದ ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಇಲ್ಲಿನ ನ್ಯಾಯಾಲಯವು ಆಪ್ ನ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೇರಿದಂತೆ ಎಲ್ಲ ಆರೋಪಿಗಳನ್ನು ಮಂಗಳವಾರ ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿ ಲಭ್ಯವಿದ್ದ ಸಾಕ್ಷ್ಯಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಸಂಜಯ್ ಸಿಂಗ್ ಪರ ವಕೀಲ ಮದನ್ ಸಿಂಗ್ ತಿಳಿಸಿದರು.
ಪೊಲೀಸ್ ಮೂಲಗಳ ಪ್ರಕಾರ, ಆಗಿನ ಬಂಧುವಾಕಲಾ ಪೊಲೀಸ್ ಠಾಣಾಧಿಕಾರಿಯ ದೂರಿನ ಮೇರೆಗೆ 2021ರ ಎ. 13ರಂದು ಎಫ್‌ಐಆರ್ ದಾಖಲಾಗಿತ್ತು.
ಆರೋಪಿಗಳು ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಆಪ್ ಬೆಂಬಲಿತ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನದ ಅಭ್ಯರ್ಥಿ ಸಲ್ಮಾ ಬೇಗಂ ಪರವಾಗಿ ಆಡಳಿತಾತ್ಮಕ ಅನುಮತಿ ಪಡೆಯದೆ ಹಸನ್ಪುರ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು ಎಂದು ಆರೋಪಿಸಲಾಗಿತ್ತು.
ಸಭೆಯಲ್ಲಿ ಸುಮಾರು 50ರಿಂದ 60 ಜನರು ಭಾಗವಹಿಸಿದ್ದರು. ಇದನ್ನು ಚುನಾವಣಾ ನೀತಿಸಂಹಿತೆ ಮತ್ತು ಕೋವಿಡ್-19 ನಿರ್ಬಂಧಗಳ ಉಲ್ಲಂಘನೆ ಎಂದು ಪೊಲೀಸರು ಪರಿಗಣಿಸಿದ್ದರು.
ಸಂಜಯ್ ಸಿಂಗ್ ಸೇರಿದಂತೆ ಒಟ್ಟು 11 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದು, ಉಳಿದವರ ವಿರುದ್ಧ ವಿಚಾರಣೆ ಮುಂದುವರಿದಿತ್ತು.
ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ಸಂಜಯ್ ಸಿಂಗ್, ಐದು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಸತ್ಯಾಂಶಗಳು ಮತ್ತು ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

