ಬೆಂಗಳೂರು : 2028ಕ್ಕೂ ಮೊದಲೇ ಚುನಾವಣೆ ಬರಬಹುದು. ಆದರೆ, ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ 'ರೈತ ಸ್ಪಂದನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಕೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ಅನ್ನದಾತರಿಗೆ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆದರೆ ಅಧಿಕಾರಕ್ಕೆ ಬರಲು ವಿಫಲವಾದ ಕಾಂಗ್ರೆಸ್, ಮೋದಿ ಸರಕಾರದ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ ಎಂದು ದೂರಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭೀಕರ ಬರ ಇದ್ದರೂ ನಿರ್ಲಕ್ಷ್ಯ ಮಾಡಿದೆ. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಅನ್ನದಾತರ ನೆರವಿಗೆ ಬಂದಿಲ್ಲ. ನಾವು ಹೋರಾಟ ಮಾಡಿದ ನಂತರ ಅಧಿವೇಶನ ಕರೆದು ರೈತ ಕುಟುಂಬಕ್ಕೆ ಎರಡೂವರೆ ಸಾವಿರ ಕೊಡ್ತೇವೆ ಎಂದು ಭಿಕ್ಷೆ ನೀಡುವ ರೀತಿ ಘೋಷಣೆ ಮಾಡಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ. ಮೂರೂವರೆ ವರ್ಷದಲ್ಲಿ ಒಂದು ಮನೆ ನೀಡಿಲ್ಲ. ವಿಶೇಷ ಚೇತನರು, ವಿಧವೆಯರಿಗೆ ಹಾಗೂ ವೃದ್ಧರಿಗೆ ನೀಡಬೇಕಾದ ಮಾಶಾಸನ ನೀಡುತ್ತಿಲ್ಲ. ಎಲ್ಲಕ್ಕೂ ಅವರು ಪ್ರತಿಭಟನೆ ಮಾಡ್ತಾ ಇದ್ದಾರೆ. ರಾಜ್ಯದ ಜನರ ಪಾಲಿಗೆ ಸರ್ಕಾರ ಬದುಕಿದ್ದೂ ಸತ್ತಂತೆ ಎಂದು ಅವರು ಆಕ್ಷೇಪಿಸಿದರು.
ಕನಕಪುರದಲ್ಲಿ ರೈತರಿಗೆ ಒಂದು ಇಂಚೂ ಜಮೀನು ಮಾರಬೇಡಿ ಎಂದು ಹೇಳುವ ಸಿಎಂ ಬಿಡದಿಯಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡಿ ಜಮೀನು ಕಸಿಯುವ ಕೆಲಸ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲೂ ಬಲವಂತವಾಗಿ ಜಮೀನು ಕಸಿದುಕೊಳ್ಳುತ್ತಿದ್ದಾರೆ. ಈ ಕಾಂಗ್ರೆಸ್ ಸರಕಾರಕ್ಕೆ ಮನುಷ್ಯತ್ವ ಇಲ್ಲ ಎಂದು ಅವರು ದೂರಿದರು.

