Wednesday, 02 Dec, 7.13 pm ವಾರ್ತಾಭಾರತಿ

ರಾಷ್ಟೀಯ
ದೇಶದಲ್ಲಿ 132 ದಿನಗಳ ನಂತರ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ

ಹೊಸದಿಲ್ಲಿ,ಡಿ.2: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದ್ದು,ಅದೀಗ 4.28 ಲಕ್ಷದಷ್ಟಿದೆ. ಇದು ಕಳೆದ 132 ದಿನಗಳಲ್ಲಿ ಕನಿಷ್ಠ ಪ್ರಮಾಣವಾಗಿದ್ದು,ದಾಖಲಾಗಿರುವ ಒಟ್ಟು ಸೋಂಕು ಪ್ರಕರಣಗಳ ಶೇ.4.51ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ತಿಳಿಸಿದೆ. ಜುಲೈ 23ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,26,167 ಆಗಿತ್ತು.

ಸಕ್ರಿಯ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಸುಸ್ಥಿರ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯವು ತಿಳಿಸಿದೆ.

ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 36,604 ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 94,99,413 ಕ್ಕೇರಿದೆ. 501 ಸಾವುಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಸಾವುಗಳ ಸಂಖ್ಯೆ 1,38,122ಕ್ಕೇರಿದೆ.

ಕಳೆದ ಮೂರು ದಿನಗಳಿಂದ ಪ್ರತಿದಿನ ಸುಮಾರು 30,000ದಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 36,604 ಹೊಸ ಪ್ರಕರಣಗಳು ವರದಿಯಾಗಿದ್ದು,43,062 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ ಐದು ದಿನಗಳಲ್ಲಿ ದೈನಿಕ ಚೇತರಿಕೆ ಪ್ರಮಾಣವು ಹೊಸ ಪ್ರಕರಣಗಳಿಗಿಂತ ಹೆಚ್ಚಾಗಿದೆ. ಚೇತರಿಕೆ ದರವು ಈಗ ಶೇ.94.03ಕ್ಕೆ ತಲುಪಿದೆ ಎಂದು ಸಚಿವಾಲಯವು ಬೆಟ್ಟು ಮಾಡಿದೆ. ಸೋಂಕಿನಿಂದ ಗುಣಮುಖಗೊಂಡಿರುವ ಒಟ್ಟು ಪ್ರಕರಣಗಳ ಸಂಖ್ಯೆ 89,32,647ರಷ್ಟಿದ್ದು,ಸಕ್ರಿಯ ಮತ್ತು ಚೇತರಿಸಿಕೊಂಡಿರುವ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಹೆಚ್ಚುತ್ತಿದೆ. ಬುಧವಾರ ಇದು 85 ಲಕ್ಷವನ್ನು ದಾಟಿದ್ದು, 85,04,003ರಷ್ಟಿದೆ ಎಂದು ಅದು ತಿಳಿಸಿದೆ.

ಹೊಸದಾಗಿ ವರದಿಯಾಗಿರುವ ಸೋಂಕು ಪ್ರಕರಣಗಳ ಪೈಕಿ ಶೇ.77.25ರಷ್ಟು ಹಾಗೂ ಶೇ.78.35ರಷ್ಟು ಚೇತರಿಕೆ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 6,290 ಚೇತರಿಕೆ ಪ್ರಕರಣಗಳು ವರದಿಯಾಗಿದ್ದು,ನಂತರದ ಸ್ಥಾನಗಳಲ್ಲಿ ಕೇರಳ(6,151) ಮತ್ತು ದಿಲ್ಲಿ (5,036) ಇವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ಹೊಸ ಪ್ರಕರಣಗಳು (5,375) ಕೇರಳದಲ್ಲಿ ವರದಿಯಾಗಿದ್ದರೆ,ಮಹಾರಾಷ್ಟ್ರ (4,930)ನಂತರದ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಗರಿಷ್ಠ ಸಾವುಗಳು (95) ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು,ದಿಲ್ಲಿ (86) ಮತ್ತು ಪಶ್ಚಿಮ ಬಂಗಾಳ (52) ನಂತರದ ಸ್ಥಾನಗಳಲ್ಲಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top