ಹೊಸದಿಲ್ಲಿ, ಎ.3: ಅಮೆರಿಕವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್ ನಿಂದ ಭಾರತಕ್ಕೆ ಕಚ್ಚಾ ತೈಲವನ್ನು ತರುತ್ತಿದ್ದ ಟ್ಯಾಂಕರ್, ಪಯಣದ ಮಧ್ಯೆ ತನ್ನ ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ ನ ದತ್ತಾಂಶಗಳು ತೋರಿಸಿವೆ.
ದತ್ತಾಂಶಗಳ ಪ್ರಕಾರ, 2025ರಲ್ಲಿ ಅಮೆರಿಕದಿಂದ ನಿರ್ಬಂಧಿಸಲ್ಪಟ್ಟಿದ್ದ 'ಪಿಂಗ್ ಷನ್' ಹಡಗು ಸುಮಾರು ಆರು ಲಕ್ಷ ಬ್ಯಾರೆಲ್ ಇರಾನ್ ತೈಲವನ್ನು ಹೊತ್ತಿದ್ದು, ಈಗ ಚೀನಾದ ಡೊಂಗ್ಯಾಂಗ್ ಕಡೆಗೆ ಸಾಗುತ್ತಿರುವ ಸಂಕೇತವನ್ನು ತೋರಿಸುತ್ತಿದೆ. ಈ ಟ್ಯಾಂಕರ್ ವಾರದ ಆರಂಭದಲ್ಲಿ ಗುಜರಾತಿನ ವಾಡಿನಾರ್ ಅನ್ನು ತನ್ನ ಗಮ್ಯಸ್ಥಾನವಾಗಿ ಪಟ್ಟಿ ಮಾಡಿತ್ತು.
ಅಮೆರಿಕವು ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ 30 ದಿನಗಳ ವಿನಾಯಿತಿ ನೀಡಿದ ಬಳಿಕ, ಭಾರತೀಯ ಸಂಸ್ಕರಣಾಗಾರಗಳು ನಿರ್ಬಂಧದಿಂದಾಗಿ ಸಮುದ್ರದಲ್ಲಿ ಬಾಕಿಯಾಗಿದ್ದ ಹಡಗುಗಳಲ್ಲಿನ ಇರಾನ್ ತೈಲವನ್ನು ಖರೀದಿಸಲು ಅವಕಾಶಗಳನ್ನು ಅನ್ವೇಷಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
2019ರಲ್ಲಿ ಅಮೆರಿಕದ ಕಠಿಣ ನಿರ್ಬಂಧಗಳು ಜಾರಿಯಾದಾಗ ಭಾರತವು ಇರಾನಿನಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿತ್ತು. 'ಪಿಂಗ್ ಷನ್' ಟ್ಯಾಂಕರ್ ಭಾರತವನ್ನು ತಲುಪಿದ್ದರೆ, ಅದು ಕಳೆದ ಏಳು ವರ್ಷಗಳಲ್ಲಿ ಇರಾನಿನಿಂದ ದೇಶಕ್ಕೆ ಬಂದ ಮೊದಲ ಕಚ್ಚಾ ತೈಲ ಆಮದಾಗಿರುತ್ತಿತ್ತು.
ಕೆಪ್ಲರ್ ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಅವರ ಪ್ರಕಾರ, ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುವ ಮೊದಲು ಮೂರು ದಿನಗಳ ಕಾಲ ಹಡಗು ವಾಡಿನಾರ್ ಮಾರ್ಗದಲ್ಲೇ ಚಲಿಸುತ್ತಿತ್ತು.
ಮಾರ್ಗ ಬದಲಾವಣೆ ಪಾವತಿ ಸಂಬಂಧಿತ ಕಳವಳಗಳಿಗೆ ಸಂಬಂಧಿಸಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಮಾರಾಟಗಾರರು ತಮ್ಮ ನಿಬಂಧನೆಗಳನ್ನು ಕಠಿಣಗೊಳಿಸುತ್ತಿದ್ದು, ಹಿಂದಿನ 30-60 ದಿನಗಳ ಸಾಲ ಸೌಲಭ್ಯದಿಂದ ದೂರ ಸರಿದು ಮುಂಗಡ ಅಥವಾ ಅಲ್ಪಾವಧಿಯ ಪಾವತಿಯನ್ನು ಹೆಚ್ಚಾಗಿ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ವಾಣಿಜ್ಯ ಹಡಗುಗಳಿಗೆ ಕಡ್ಡಾಯವಾಗಿರುವ ಆಟೊಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಮ್ (AIS) ತೋರಿಸುವ ಗಮ್ಯಸ್ಥಾನ ಅಂತಿಮವಾಗಿರುವುದಿಲ್ಲ ಮತ್ತು ಯಾನದ ಯಾವುದೇ ಹಂತದಲ್ಲಿ ಬದಲಾಗಬಹುದು.
ಹಡಗು ಆರಂಭದಲ್ಲಿ ಸೂಚಿಸಿದ್ದ ವಾಡಿನಾರ್ ಬಂದರುದಲ್ಲಿ ರಷ್ಯಾ ಬೆಂಬಲಿತ ನಯಾರಾ ಎನರ್ಜಿ ನಿರ್ವಹಿಸುತ್ತಿರುವ ವಾರ್ಷಿಕ 20 ಮಿಲಿಯನ್ ಟನ್ ಸಾಮರ್ಥ್ಯದ ಸಂಸ್ಕರಣಾಗಾರವಿದೆ.
ಹಣಪಾವತಿ ಸಮಸ್ಯೆಗಳು ಬಗೆಹರಿದರೆ, ಟ್ಯಾಂಕರ್ ಮತ್ತೆ ಭಾರತೀಯ ಸಂಸ್ಕರಣಾಗಾರದತ್ತ ದಿಕ್ಕು ಬದಲಿಸುವ ಸಾಧ್ಯತೆ ಇದೆ ಎಂದು ರಿಟೋಲಿಯಾ ತಿಳಿಸಿದ್ದಾರೆ.

