Dailyhunt Logo
  • Light mode
    Follow system
    Dark mode
    • Play Story
    • App Story
ದುಬಾರೆ ಪ್ರಕರಣ: ಸ್ವಯಂ ಪ್ರೇರಿತ ದೂರು ದಾಖಲು

ದುಬಾರೆ ಪ್ರಕರಣ: ಸ್ವಯಂ ಪ್ರೇರಿತ ದೂರು ದಾಖಲು

ಡಿಕೇರಿ: ಕೊಡಗಿನ ಪ್ರಸಿದ್ಧ ಪ್ರವಾಸಿತಾಣ ದುಬಾರೆ ಸಾಕಾನೆ ಶಿಬಿರದಲ್ಲಿ ಮೇ 18ರಂದು ನಡೆದ ಸಾಕಾನೆಗಳ ಕಾಳಗದಲ್ಲಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ದುಬಾರೆ ಘಟನೆಯಲ್ಲಿ ಮಹಿಳೆ ಮೃತಪಟ್ಟಿರುವುದು ಮತ್ತು ಘರ್ಷಣೆಯಲ್ಲಿ ಗಾಯಗೊಂಡ 'ಮಾರ್ತಾಂಡ' ಆನೆಯೂ ಮೃತಪಟ್ಟಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ನಿಷ್ಕ್ರಿಯತೆ, ವೈಫಲ್ಯವನ್ನು ಸೂಚಿಸುತ್ತದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಸಾರ್ವಜನಿಕರ ಕುಂದುಕೊರತೆ ಪರಿಹಾರಕ್ಕಾಗಿ ಕಲಂ 12(1)ರ ಅಡಿಯಲ್ಲಿ ಲೋಕಾಯುಕ್ತ, ಉಪ ಲೋಕಾಯುಕ್ತರ ಮೇಲೆ ಬಾಧ್ಯತೆಯನ್ನು ವಿಧಿಸುತ್ತದೆ ಮತ್ತು ಕಲಂ2(10)ರ ಅಡಿಯಲ್ಲಿ ಸಾರ್ವಜನಿಕ ಅಧಿಕಾರಿಗಳಿಂದ ಆಗುವ ದುರಾಡಳಿತವನ್ನು ತಡೆ ಹಿಡಿಯಲು ಬಾಧ್ಯತೆಯನ್ನು ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ(7(2) ಮತ್ತು ಕಲಂ 9(3)(ಎ) ಪ್ರಕಾರ ಅಧಿಕಾರ ಚಲಾಯಿಸಿ ಸ್ವಯಂ ಪ್ರೇರಿತ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಈ ಕ್ರಮವನ್ನು ಸುವೋಮೋಟೋ ಪ್ರಕ್ರಿಯೆಗಳಿಗೆ ನೋಂದಾಯಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಕುಂದುಕೊರತೆ ಪರಿಹಾರ ಉದ್ದೇಶಕ್ಕಾಗಿ ಮತ್ತು ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳ ಕಡೆಯಿಂದ ಯಾವುದೇ ನಿಷ್ಕ್ರಿಯತೆ ಅಥವಾ ದುರಾಡಳಿತವಿದೆಯೇ ಎಂದು ಪರಿಶೀಲಿಸಲು ಸೋಮವಾರಪೇಟೆ ಉಪ ವಲಯದ ಎಸಿಎಫ್ ಗೋಪಾಲ್ ಎ.ಎ. ಮತ್ತು ಕುಶಾಲನಗರ ವಲಯ ಅರಣ್ಯ ಆರ್‌ಎಫ್‌ಒ ರಕ್ಷಿತ್ ಅವರನ್ನು ಎದುರುದಾರರು ಎಂದು ಉಲ್ಲೇಖಿಸಿ ನೋಟಿಸ್ ನೀಡಲು ಕೆ.ಎನ್.ಫಣೀಂದ್ರ ನಿರ್ದೇಶನ ನೀಡಿದ್ದಾರೆ.

ಮಾತ್ರವಲ್ಲದೆ ನೋಟೀಸ್ ತಲುಪಿದ 4 ವಾರಗಳ ಒಳಗೆ ತಮ್ಮ ಅಭಿಪ್ರಾಯ ಮತ್ತು ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಬೇಕು. ನಿಗದಿತ ದಿನಾಂಕದಂದು ತಮ್ಮ ಆಕ್ಷೇಪ ಹಾಗೂ ವರದಿಯೊಂದಿಗೆ ಖುದ್ದು ಹಾಜರಾಗುವಂತೆ ಎಸಿಎಫ್ ಗೋಪಾಲ್ ಮತ್ತು ಆರ್‌ಎಫ್‌ಒ ರಕ್ಷಿತ್ ಅವರಿಗೆ ಸೂಚಿಸಿದ್ದಾರೆ.

ಈ ಆದೇಶದ ಪ್ರತಿಯನ್ನು ಕೊಡಗು ಜಿಲ್ಲಾಧಿಕಾರಿ, ಪ್ರದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮಾಹಿತಿಗಾಗಿ ಕಳುಹಿಸಿ ಗಮನಿಸಿರುವ ಲೋಪ ದೋಷಗಳು, ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ತಮ್ಮ ವತಿಯಿಂದ ಅಗತ್ಯವಿರುವ ಕ್ರಮ ವಹಿಸಿ, ಕೈಗೊಂಡ ಕ್ರಮದ ವರದಿಯನ್ನೂ ಸಲ್ಲಿಸುವಂತೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi