ಬಾರ್ಸಿಲೋನ, ಎ. 3: ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯದ ವೇಳೆ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿರುವುದಕ್ಕಾಗಿ ಸ್ಪೇನ್ ಪ್ರೇಕ್ಷಕರ ಒಂದು ವರ್ಗವನ್ನು ದೇಶದ ಸ್ಟಾರ್ ಆಟಗಾರ ಲಮಿನ್ ಯಮಲ್ ಟೀಕಿಸಿದ್ದಾರೆ. ಫುಟ್ಬಾಲ್ ನಲ್ಲಿ ಇಂತಹ ವರ್ತನೆಯನ್ನು ಸಹಿಸಬಾರದು ಎಂದು ಅವರು ಹೇಳಿದ್ದಾರೆ.
ಬಾರ್ಸಿಲೋನದ RCDE ಸ್ಟೇಡಿಯಮ್ ನಲ್ಲಿ ಮಂಗಳವಾರ ಘಟನೆ ನಡೆದಿದೆ. ಪ್ರೇಕ್ಷಕರ ಒಂದು ವರ್ಗವು ''ಬೋಟೆ, ಬೋಟೆ, ಬೋಟೆ ಮುಸಲ್ಮಾನ್ ಎಲ್ ಕ್ಯೂ ನೋ ಬೋಟೆ (ಜಿಗಿ, ಜಿಗಿ, ಜಿಗಿ, ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್)'' ಎಂಬ ಘೋಷಣೆಯನ್ನು ಕೂಗಿತ್ತು. ಪಂದ್ಯದ ವೇಳೆ ಹಲವು ಬಾರಿ ಈ ಘೋಷಣೆಯನ್ನು ಕೂಗಲಾಗಿತ್ತು.
ಆಗ ಸ್ಟೇಡಿಮ್ ನಲ್ಲಿ, ಘೋಷಣೆಯೊಂದನ್ನು ಹೊರಡಿಸಿ, ಜನಾಂಗೀಯವಾದಿ ಭಾಷೆಯನ್ನು ಬಳಸದಂತೆ ಪ್ರೇಕ್ಷಕರಿಗೆ ಮನವಿ ಮಾಡಲಾಯಿತು. ಅದೇ ಸಂದೇಶವನ್ನು ದೊಡ್ಡ ಪರದೆಯಲ್ಲೂ ಪ್ರದರ್ಶಿಸಲಾಯಿತು. ಈ ಘೋಷಣೆಯನ್ನು ಪ್ರೇಕ್ಷಕರ ಒಂದು ವರ್ಗವು ಶಿಳ್ಳೆಗಳ ಮೂಲಕ ಸ್ವಾಗತಿಸಿತು.
ಈಜಿಪ್ಟ್ ಮುಖ್ಯವಾಗಿ ಮುಸ್ಲಿಮ್ ಬಾಹುಳ್ಯದ ದೇಶ. 18 ವರ್ಷದ ಸ್ಪೇನ್ ಆಟಗಾರ ಲಮಿನ್ ಯಮಲ್ ಕೂಡ ಮುಸ್ಲಿಮ್. ಅವರು ಇದಕ್ಕೆ ಮೊದಲು ಕೂಡ ತನ್ನ ಧರ್ಮದ ಬಗ್ಗೆ ಮಾತನಾಡಿದ್ದಾರೆ.
''ನಾನೊಬ್ಬ ಮುಸ್ಲಿಮ್, ಧನ್ಯವಾದಗಳು ದೇವರೇ'' ಎಂಬುದಾಗಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
''ನಿನ್ನೆ ಸ್ಟೇಡಿಯಮ್ ನಲ್ಲಿ, 'ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್' ಎಂಬ ಘೋಷಣೆಯನ್ನು ನಾವು ಕೇಳಿದೆವು. ಅದನ್ನು ಎದುರಾಳಿ ತಂಡವನ್ನು ಉದ್ದೇಶಿಸಿ ಹೇಳಿರುವುದು ಎಂದು ನನಗೆ ಗೊತ್ತಿದೆ. ವೈಯಕ್ತಿಕವಾಗಿ ಅದು ನನ್ನ ಬಗ್ಗೆ ಹೇಳಿದ್ದಲ್ಲ. ಆದರೆ, ಸ್ವತಃ ಮುಸ್ಲಿಮ್ ಆಗಿರುವ ನನಗೂ ಈ ಘೋಷಣೆಯು ಅಗೌರವಯುತವಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ.
''ಎಲ್ಲಾ ಅಭಿಮಾನಿಗಳು ಹಾಗಿಲ್ಲ ಎನ್ನುವುದೂ ನನಗೆ ಗೊತ್ತು. ಆದರೆ, ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಜನರನ್ನು ಹೀಯಾಳಿಸಲು ಧರ್ಮವನ್ನು ಬಳಸಿದರೆ, ನೀವು ಅಜ್ಞಾನಿಗಳು ಮತ್ತು ಜನಾಂಗೀಯವಾದಿಗಳಾಗುತ್ತೀರಿ. ಫುಟ್ಬಾಲ್ ಇರುವುದು ಆನಂದಿಸಲು ಮತ್ತು ಬೆಂಬಲಿಸುವುದಕ್ಕಾಗಿಯೇ ಹೊರತು, ಜನರು ಏನಾಗಿದ್ದಾರೋ ಮತ್ತು ಏನನ್ನು ನಂಬುತ್ತಾರೋ ಅದರ ಮೂಲಕ ಅವರನ್ನು ನೋಯಿಸಲು ಅಲ್ಲ'' ಎಂದು ಅವರು ಬರೆದಿದ್ದಾರೆ.
''ಆದರೂ, ಬೆಂಬಲಿಸಲು ಮೈದಾನಕ್ಕೆ ಬಂದ ಅಭಿಮಾನಿಗಳಿಗೆ ಧನ್ಯವಾದಗಳು'' ಎಂದು ಅವರು ಹೇಳಿದ್ದಾರೆ.

