ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಹಿಂದಿ ಪರವಾಗಿ ಮಾತನಾಡುವುದು ಸರಿಯಲ್ಲ. ಏಕೆಂದರೆ ಬಹುತೇಕ ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡುತ್ತಾರೆಂದು ಉತ್ತರ ಕೊಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಆಳಿದವರಾಗಿದ್ದು, ಅವರಿಗೆ ಗೌರವ ಕೊಡುತ್ತೇವೆ. ಆದರೆ ಬಿಜೆಪಿಯವರೇ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂದರು.
ರಾಜ್ಯದ ತೆರಿಗೆ ಸಂಗ್ರಹ ಕುರಿತಂತೆ ಬಿಜೆಪಿಯವರು ಮಾತನಾಡುವುದಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಬರಗಾಲ ಬಂದಾಗಲೂ ಬಿಜೆಪಿಯವರು ಮಾತನಾಡುವುದಿಲ್ಲ. ಆದರೆ ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ಸಚಿವರಿಗೆ ಶಿಕ್ಷಣವಿಲ್ಲ ಎಂದು ಟೀಕಿಸಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಅವರು ಹಿಂದಿ ಮಾತನಾಡುವುದನ್ನು ನೋಡಿ, ನಾವು ರಾಜ್ಯದಲ್ಲಿ ತೃತೀಯ ಭಾಷೆ ಹಿಂದಿ ವಿಚಾರದಲ್ಲಿ ಗ್ರೇಡಿಂಗ್ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ತೃತೀಯ ಭಾಷೆ ಹೇರಿಕೆಯಾಗಿದೆ. ಕೆಲವು ಕಡೆ ಕನ್ನಡ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ನಮ್ಮ ಕನ್ನಡಿಗರು ಹೊಟ್ಟೆಪಾಡಿಗಾಗಿ ಹಿಂದಿ ಬೋಧನೆ ಮಾಡುತ್ತಿದ್ದಾರೆ. ಅಂಥವರಿಗೆ ಯಾವುದೇ ಒತ್ತಡ ಆಗಬಾರದು. ಅಲ್ಲದೆ ಯಾವುದೇ ಭಾಷೆ ವಿರುದ್ಧ ನಾವಿಲ್ಲ. ಈಗ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು ಎಂದು ಅವರು ತಿಳಿಸಿದರು.

