Dailyhunt Logo
  • Light mode
    Follow system
    Dark mode
    • Play Story
    • App Story
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ : ನೂತನ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ತೀರ್ಮಾನ

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ : ನೂತನ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ತೀರ್ಮಾನ

ಬೆಂಗಳೂರು : ರಾಜ್ಯದ ಯುವಕರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ, ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ 10 ಸಾವಿರ ಭಾರತ್ ಜೋಡೊ ಯುವಕರ ಸಂಘಗಳನ್ನು ರಚನೆ ಮಾಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಮೊಟ್ಟ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್‍ವಾರು ಒಂದು ಭಾರತ್ ಜೋಡೊ ಯುವಕರ ಸಂಘವನ್ನು ರಚನೆ ಮಾಡಲಾಗುವುದು. ಪ್ರತಿಯೊಂದು ಸಂಘಕ್ಕೂ ತಲಾ 10 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಉಚಿತ ಬಸ್ ಪಾಸ್: ರಾಜ್ಯದ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‍ಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ನಾವು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ: ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ 56 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಕೆಲವು ಕಾರಣಾಂತರಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ, ನಾವು ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಆದಷ್ಟು ಬೇಗ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ: ಕರ್ನಾಟಕವು ಇಡೀ ದೇಶದಲ್ಲೆ ಮಾನವ ಸಂಪನ್ಮೂಲದ ರಾಜಧಾನಿಯಾಗಿದೆ. ಕೇವಲ ಐಟಿ, ಬಿಟಿ ಅಷ್ಟೇ ಅಲ್ಲ ಅನೇಕ ರಂಗಗಳಲ್ಲಿ ನಮ್ಮ ಯುವಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ನಮ್ಮ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ನಾವು ಮಾತುಕತೆ ನಡೆಸುತ್ತೇವೆ. ಅವರಿಗೆ ಅಗತ್ಯವಿರುವಂತಹ ಮಾನವ ಸಂಪನ್ಮೂಲವನ್ನು ತಯಾರು ಮಾಡಲು ಅಗತ್ಯ ತರಬೇತಿಯನ್ನು ನೀಡಲಾಗುವುದು. ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಸಂಪುಟದ ಮೂವರು ಸಚಿವರು ಈ ಕುರಿತು ವಿವರವಾಗಿ ಚರ್ಚಿಸಿ ಒಂದು ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆನಂತರ, ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಒಸಿ-ಸಿಸಿ ನೀಡಲು ನಿರ್ಧಾರ:ರಾಜ್ಯಕ್ಕೆ ರಾಜ್ಯದಲ್ಲಿ 30/40 ಅಳತೆಯ ನಿವೇಶನದಲ್ಲಿ ಕಟ್ಟಿದ ಮನೆಗೆ ಸ್ವಾಧೀನ ಪ್ರಮಾಣಪತ್ರ(ಒಸಿ), ನಿರ್ಮಾಣಕಾರ್ಯ ಪೂರ್ಣಗೊಂಡಿರುವ ಪ್ರಮಾಣಪತ್ರ(ಸಿಸಿ) ಇಲ್ಲದೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಈ ದೊಡ್ಡ ಸಮಸ್ಯೆಯನ್ನು ಬಗೆಹರಿಸಲು 2026ನೆ ಸಾಲಿನ ಮೇ 31ರವರೆಗೆ ಯಾರೆಲ್ಲ ಕಟ್ಟಡ ಕಟ್ಟಿದ್ದಾರೆ ಅವರಿಗೆ 2500 ಅಡಿಯವರೆಗೆ ವಿನಾಯಿತಿ ನೀಡಿ, ಒನ್ ಟೈಂ ಸೆಟಲ್ಮೆಂಟ್‍ನಲ್ಲಿ ಒಸಿ, ಸಿಸಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

'ಬಿ ಟು ಎ ಖಾತಾ': ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕಲ್ಪಿಸಲಾಗಿರುವ 'ಬಿ ಟು ಎ ಖಾತಾ' ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗ್ರಾಮೀಣ ಹಾಗೂ ನಗರದ ಜನರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮುಂದೆ ಏನೇ ನಿರ್ಧಾರ ತೆಗೆದುಕೊಂಡರೂ ಅದು ನನ್ನ ಒಬ್ಬನ ನಿರ್ಧಾರ ಆಗಿರುವುದಿಲ್ಲ. ಬದಲಾಗಿ ನನ್ನ ಇಡೀ ಸಂಪುಟದ ನಿರ್ಧಾರ ಆಗಿರುತ್ತದೆ. ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲವೂ ಸಾಮೂಹಿಕ ನಿರ್ಧಾರ(ಕಲೆಕ್ಟಿವ್ ಡಿಸಿಷನ್) ಆಗಿರುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi