ಮಂಗಳೂರು, ಜು. 8: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್) ದ.ಕ. ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ, ಪಕ್ಷಾತೀತವಾಗಿ ನಡೆದು ಯಾವೊಬ್ಬ ಅರ್ಹ ಮತದಾರರೂ ಪಟ್ಟಿಯಿಂದ ಬಿಟ್ಟು ಹೋಗದಿರುವ ನಿಟ್ಟಿನಲ್ಲಿ ನಡೆಯಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರು ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಕೊಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕರ ಹಕ್ಕು. ಅರ್ಹ ಮತದಾರರನ್ನು ಯಾವುದೇಕಾರಣಕ್ಕೂ ಪಟ್ಟಿಯಿಂದ ಕೈ ಬಿಟ್ಟಲ್ಲಿ ಆತ ಜೀವಂತ ಇದ್ದರೂ ಸತ್ತ ಹಾಗೆ. ಅದಕ್ಕೆ ಅವಕಾಶ ಆಗದಂತೆ ಎಸ್ಐಆರ್ ಪ್ರಕ್ರಿಯೆ ನಡೆಸಬೇಕಿದೆ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡರು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ. ಬೇರೆ ದೇಶದವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಸಾಮೂಹಿಕವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬುದಾಗಿ ಮಸೀದಿಗಳ ಹೆಸರನ್ನೂ ಹೇಳುತ್ತಾರೆ. ಆನ್ಲೈನ್ನಲ್ಲಿಯೇ ಎಸ್ಐಆರ್ ಪ್ರಕ್ರಿಯೆ ನಡೆಸಲು ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಹಾಗಿರುವಾಗ ಬಿಜೆಪಿಯವರದ್ದು ತಲೆಬುಡ ಇಲ್ಲದ ಮಾತುಗಳು. ಬಿಎಲ್ಒಗಳು ಹಲವು ಕಷ್ಟಗಳ ನಡುವೆಯೂ ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಈ ಕೆಲಸದಲ್ಲೂ ತಮ್ಮ ರಾಜಕೀಯ, ಮತೀಯ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅವಧಿಯಲ್ಲಿಯೂ ಎಸ್ಐಆರ್ ಪ್ರಕ್ರಿಯೆ ಆಗಿದೆ. ಇದು 11ನೆ ಎಸ್ಐಆರ್ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ನನ್ನ ಅನುಭವದ ಪ್ರಕಾರ ಹಿಂದೆಯೂ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕಾನಿಷ್ಮಾರಿ ಹೆಸರಿನಲ್ಲಿ ನಡೆಸಲಾಗುತ್ತಿತ್ತು. ಈ ರೀತಿ ಎನ್ಯುಮರೇಶನ್ ಫಾರಂಗೆ ಸಹಿ ಹಾಕಿಸಿಕೊಂಡು ನಡೆಸುವ ಪ್ರಕ್ರಿಯೆ ನಡೆದಿಲ್ಲ. ಈ ಪ್ರಕ್ರಿಯೆ ನನಗೂ ಹೊಸ ಅನುಭವ ಎಂದು ಅವರು ಹೇಳಿದರು.
ಮತದಾರರ ಪಟ್ಟಿಗೆ ಸೇರಿಸಲು ಸಾಕಷ್ಟು ದಾಖಲೆ, ಪುರಾವೆಗಳನ್ನು ನೀಡಬೇಕು. ಆದರೆ ತೆಗೆದು ಹಾಕುವುದು ಸುಲಭ. ಅದನ್ನು ಮಾಡುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಾರೆ ಎಂದವರು ಆರೋಪಿಸಿದರು.
ಬಿಎಲ್ಒಗಳ ಜತೆ ಎಲ್ಲಾ ಪಕ್ಷದ ಬಿಎಲ್ಎಗಳಿಗೂ ಮನೆ ಮನೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಪಕ್ಷದಿಂದಲೂ ಬಿಎಲ್ಎಗಳಿಗೆ ಮಾಹಿತಿ, ಜಾಗೃತಿ ಒದಗಿಸಲಾಗಿದ್ದು, ಜಿಲ್ಲೆಯಲ್ಲಿ ಬಿಎಲ್ಒಗಳ ಮೂಲಕವೂ ಪಕ್ಷಾತೀತವಾಗಿ ಬಿಎಲ್ಎಗಳಿಗೆ ಮಾಹಿತಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಹರಿನಾಥ್, ಮಮತಾ ಗಟ್ಟಿ, ಮಂಜುಳಾ ನಾಯಕ್, ವಿಕಾಸ್ ಶೆಟ್ಟಿ, ಶುಭೋದಯ ಆಳ್ವ, ಹೊನ್ನಯ್ಯ, ಪದ್ಮನಾಭ, ಗೀತಾ, ಸಚಿನ್, ಯೋಗೀಶ್, ಶಬೀರ್, ಸುಹಾನ್ ಆಳ್ವ, ಜೋಕಿಂ, ಪ್ರಸಾದ್ ಜೈನ್, ಸುನಿಲ್, ಮೊದಲಾದವರು ಉಪಸ್ಥಿತರಿದ್ದರು.
ಬಿಎಲ್ಒಗಳು ಯಾವ ರಾಜಕೀಯ ಪಕ್ಷದವರು ಎಂಬುದು ಯಾರಿಗೂ ಅರಿವಿಲ್ಲ. ಹಾಗಾಗಿ ಅವರ ಕೆಲಸದ ಬಗ್ಗೆ ಅನುಮಾನ ಬೇಡ. ಹಾಗಾಗಿ ಕಾಂಗ್ರೆಸ್ ಮತದಾರರ ಹೆಚ್ಚಿರುವ ಕಡೆ ಬಿಎಲ್ಒಗಳಿಂದ ಶೇ. 100ರಷ್ಟು ಎನುಮರೇಶನ್ ಪತ್ರ ನೀಡಲಾಗಿದೆ ಎಂಬ ಬಿಜೆಪಿಯವರ ಆರೋಪಗಳು ರಾಜಕೀಯ ಪ್ರೇರಿತ. ಎಸ್ಐಆರ್ ಪ್ರಕ್ರಿಯೆಯಲ್ಲೂ ಕೋಮುವಾದ, ರಾಜಕೀಯ ಬೆರೆಸುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಮಾನಾಥ ರೈ, ನಮ್ಮ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆದು ರಾಜ್ಯಕ್ಕೆ ನಂ. 1 ಆಗಿ ಮತದಾರರ ಪಟ್ಟಿ ಪರಿಷ್ಕರಣೆಯಾಗುವ ಭರವಸೆ ನನಗಿದೆ ಎಂದು ರಮಾನಾಥ ರೈ ಹೇಳಿದರು.
ಕಚ್ಚಾ ತೈಲ ಬೆಲೆ ಇಳಿಕೆ ಪ್ರಯೋಜನ ಜನಸಾಮಾನ್ಯರಿಗೆ ಸಿಗಲಿ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಅದರ ಲಾಭ ಜನಸಾಮಾನ್ಯರಿಗೆ ದೊರೆಯಬೇಕೇ ಹೊರತು ತೈಲ ಕಂಪನಿಗಳಿಗೆ ಅಲ್ಲ ಎಂದರು.
ಮಿಲಿಟ್ರಿ, ಇಂಟೆಲಿಜೆನ್ಸಿ, ಆರ್ಬಿಐ ಸೇರಿದಂತೆ ಎಲ್ಲವೂ ಸರಕಾರದ ಅಧೀನದಲ್ಲಿ ಇರುವಾಗ ನುಸುಳುಕೋರರು ಹೇಗೆ ಬರುತ್ತಾರೆ ಎಂದು ಹಿಂದೆ ಯುಪಿಎ ಸರಕಾರವನ್ನು ಪ್ರಶ್ನಿಸುತ್ತಿದ್ದವರು ಈಗ ಬಿಜೆಪಿ ಆಡಳಿತದ ಅವಧಿಯಲ್ಲಿ ಆರ್ಡಿಎಕ್ಸ್ ದೇಶದ ಒಳಗೆ ಹೇಗೆ ಬಂತು ಎಂಬುದಕ್ಕೆ ಉತ್ತರ ನೀಡಬೇಕಿದೆ. ತಮ್ಮ ಆಡಳಿತದ ಅವಧಿಯಲ್ಲಿ ದೇಶದಲ್ಲಿ ನುಸುಳುಕೋರರು ಸೇರಿರುವಾಗ ಆಡಳಿತ ನಡೆಸುವವರು ಏನು ಮಾಡುತ್ತಿದ್ದರು ಎಂದು ರಮಾನಾಥ ರೈ ಪ್ರಶ್ನಿಸಿದ್ದಾರೆ.
ಧರ್ಮ, ದೇಶ ಪ್ರೇಮದ ಹೆಸರಿನ ಜತೆಗೆ ಅಯೋಧ್ಯೆ ದೇವರ ಹೆಸರಿನಲ್ಲೂ ಲೂಟಿ ನಡೆದಿರುವುದು ಬೇಸರದ ಸಂಗತಿ. ಕೊಲ್ಲೂರು ದೇವಳದಿಂದ ಶಿಕ್ಷಣ ಸಂಸ್ಥೆಯೊಂದು ಚೆಕ್ ಮೂಲಕ ಊಟದ ಹಣ ಪಡೆಯುತ್ತಿದ್ದನ್ನು ನಿಲ್ಲಿಸಿದ್ದಕ್ಕೆ ನನ್ನನ್ನು ವಿರೋಧಿಸಲಾಗಿತು. ಆದರೆ ಇದೀಗ ಧರ್ಮದ ಹೆಸರಿನಲ್ಲಿ ದೇವರ ಹುಂಡಿಗೆ ಕೈ ಹಾಕಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.
ಪಕ್ಷದ ಹುದ್ದೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡಬೇಕು ಎಂಬುದು ನನ್ನ ಬೇಡಿಕೆ ಕೂಡ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ನಿಗಮ ಮಂಡಳಿ ನಾನು ಕೇಳುವುದಿಲ್ಲ. ಜನರ ಮಧ್ಯೆ ಇದ್ದು ನಾಯಕತ್ವ ಪಡೆಯಲು ಬಯಸುವವನು ನಾನು. ಇವತ್ತಿಗೂ ಕಾರ್ಯಕರ್ತರ ಜತೆಗಿದ್ದು ಕೆಲಸ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕ, ಕ್ರಿಯಾಶೀಲ, ಕಪ್ಪು ಚುಕ್ಕೆ ಇಲ್ಲದೆ ಬದುಕುತ್ತಿದ್ದೇನೆ ಎಂದರು.

