ಮಾಸ್ಕೊ, ನ. 24: ರಶ್ಯ ಮತ್ತು ಎಸ್ಟೋನಿಯಾ ನಡುವಿನ ಐದು ರಸ್ತೆ ಗಡಿ ದಾಟುವಿಕೆ ಕೇಂದ್ರಗಳನ್ನು ಮುಚ್ಚುವುದಾಗಿ ಎಸ್ಟೋನಿಯಾ ಘೋಷಿಸಿದ ಬೆನ್ನಲ್ಲೇ, NATO ಮತ್ತು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾದ ಎಸ್ಟೋನಿಯಾ ವಿರುದ್ಧ ರಶ್ಯದ ವಿದೇಶಾಂಗ ಸಚಿವಾಲಯ ತೀವ್ರ ವಾಗ್ದಾಳಿ ನಡೆಸಿದೆ.
ಎಸ್ಟೋನಿಯಾವು 'ಬಹಿರಂಗ ಯುದ್ಧವನ್ನು ಪ್ರಚೋದಿಸುವ ಅಂಚಿನಲ್ಲಿರುವ' ಹಲವಾರು ಪ್ರತಿಕೂಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಶ್ಯ ಆರೋಪಿಸಿದೆ.
ಎಸ್ಟೋನಿಯಾದ ರಕ್ಷಣಾ ಕಂಪೆನಿ Threod Systems ಮೇಲೆ ಬೆಂಕಿ ಹಚ್ಚುವ ಪ್ರಯತ್ನದ ಹಿಂದೆ ರಶ್ಯದ ಭದ್ರತಾ ಏಜೆನ್ಸಿಗಳ ಕೈವಾಡವಿದೆ ಎಂದು ಎಸ್ಟೋನಿಯಾ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ, ಡಿ. 1ರಿಂದ ಕನಿಷ್ಠ ಆರು ತಿಂಗಳ ಕಾಲ ರಶ್ಯದೊಂದಿಗಿನ ಐದು ರಸ್ತೆ ಗಡಿ ದಾಟುವಿಕೆ ಕೇಂದ್ರಗಳನ್ನು ಮುಚ್ಚಲು ಯೋಜಿಸಿದೆ. ಈ ನಿರ್ಬಂಧ ರೈಲು ಸರಕು ಸಾಗಣೆಗೆ ಅನ್ವಯಿಸುವುದಿಲ್ಲ. ಆದರೆ, ಬೆಂಕಿ ಹಚ್ಚುವ ಪ್ರಯತ್ನದಲ್ಲಿ ತನ್ನ ಪಾತ್ರವಿಲ್ಲ ಎಂದು ರಶ್ಯ ಹೇಳಿದೆ.
ಗಡಿ ಮುಚ್ಚುವ ನಿರ್ಧಾರದ ವಿರುದ್ಧ ಔಪಚಾರಿಕ ಪ್ರತಿಭಟನೆ ದಾಖಲಿಸಲು ಮಾಸ್ಕೊದಲ್ಲಿರುವ ಎಸ್ಟೋನಿಯಾದ ರಾಯಭಾರಿ ಕಚೇರಿಯ ಪ್ರತಿನಿಧಿಯನ್ನು ಕರೆಸಿಕೊಳ್ಳಲಾಗಿದೆ. ಇಂತಹ ಪ್ರಚೋದನಕಾರಿ ಮತ್ತು ಅತ್ಯಂತ ಅಪಾಯಕಾರಿ ಕ್ರಮಗಳು ರಶ್ಯದೊಂದಿಗೆ ಬಹಿರಂಗ ಯುದ್ಧವನ್ನು ಪ್ರಚೋದಿಸುವ ಅಂಚಿನಲ್ಲಿವೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಶ್ಯದ ಗುರಿಗಳ ಮೇಲೆ ದಾಳಿ ನಡೆಸಲು ಎಸ್ಟೋನಿಯಾ ರಹಸ್ಯವಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಉಕ್ರೇನ್ಗೆ ಅವಕಾಶ ನೀಡಿದೆ. ಅಲ್ಲದೆ, ಬಾಲ್ಟಿಕ್ ಸಮುದ್ರದಲ್ಲಿ ರಶ್ಯದ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ, ರಶ್ಯ ಮತ್ತು ಬೆಲಾರಸ್ನ ಧಾನ್ಯಗಳ ಸಾಗಣೆಯನ್ನು ನಿಷೇಧಿಸಿದೆ, ರಶ್ಯನ್ ಭಾಷೆಯನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ ಮತ್ತು ರಶ್ಯನ್ ಆರ್ಥೊಡಾಕ್ಸ್ ಚರ್ಚ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕುತ್ತಿದೆ ಎಂದೂ ರಶ್ಯ ಆರೋಪಿಸಿದೆ.
ರಶ್ಯದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮತ್ತು ತನ್ನ ನಾಗರಿಕರ ನ್ಯಾಯಸಮ್ಮತ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಸಮಗ್ರ ರಾಜಕೀಯ ಮತ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ರಶ್ಯ ಕಾಯ್ದಿರಿಸಿದೆ ಎಂದು ರಶ್ಯ ಹೇಳಿದೆ. ಈ ಆರೋಪಗಳನ್ನು ನಿರಾಕರಿಸಿರುವ ಎಸ್ಟೋನಿಯಾದ ವಿದೇಶಾಂಗ ಇಲಾಖೆ, 'ಯುರೋಪಿಯನ್ ಭದ್ರತೆಯನ್ನು ದುರ್ಬಲಗೊಳಿಸುವ ತನ್ನದೇ ಕೃತ್ಯಗಳಿಂದ ಗಮನ ಬೇರೆಡೆ ಸೆಳೆಯಲು ರಶ್ಯವು ಎಸ್ಟೋನಿಯಾ ವಿರುದ್ಧ ಆಧಾರರಹಿತ ಆರೋಪಗಳ ಸುರಿಮಳೆಗೈಯುತ್ತಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

