Dailyhunt
ಫಿಡೆ ಚೆಸ್ ಕ್ಯಾಂಡಿಡೇಡ್ಸ್ ಟೂರ್ನಿ: ಫ್ಯಾಬಿಯಾನೊಗೆ ಸೋಲಿನ ಕಹಿ ಉಣಿಸಿದ ಸಿಂದಾರೋವ್

ಫಿಡೆ ಚೆಸ್ ಕ್ಯಾಂಡಿಡೇಡ್ಸ್ ಟೂರ್ನಿ: ಫ್ಯಾಬಿಯಾನೊಗೆ ಸೋಲಿನ ಕಹಿ ಉಣಿಸಿದ ಸಿಂದಾರೋವ್

ಚೆನ್ನೈ: ಉಜ್ಬೇಕಿಸ್ತಾನದ 20ರ ವಯಸ್ಸಿನ ಆಟಗಾರ ಜಾವೋಖಿರ್ ಸಿಂದಾರೋವ್ ಬುಧವಾರ ಸೈಪ್ರಸ್ ನಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವದ ನಂ.3ನೇ ಆಟಗಾರ ಫ್ಯಾಬಿಯಾನೊ ಕರುವಾನಾರನ್ನು ಸೋಲಿಸಿ ಆಘಾತ ನೀಡಿದರು.

ವಿಶ್ವದ ನಂ.11ನೇ ಆಟಗಾರನಾಗಿರುವ ಸಿಂದಾರೋವ್ ನಾಲ್ಕು ಸುತ್ತುಗಳ ಪಂದ್ಯಗಳ ನಂತರ 3.5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

''ನಾನು ಕರುವಾನಾ ವಿರುದ್ಧ ಉತ್ತಮ ಆಟ ಆಡಿದೆ. ನನ್ನ ಅವಕಾಶದ ಬಗ್ಗೆ ನನಗೆ ವಿಶ್ವಾಸವಿತ್ತು. ಆದರೆ ಆಟದ ಮಧ್ಯದಲ್ಲಿ ಕೆಲವು ತಪ್ಪುಗಳನ್ನು ಮಾಡಿರಬಹುದು'' ಎಂದು ಸಿಂದಾರೋವ್ ಅವರು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಜ್ಬೇಕಿಸ್ತಾನವು ಫಿಡೆ ವರ್ಲ್ಡ್ ರ್ಯಾಪಿಡ್ ಹಾಗೂ ಬ್ರಿಟ್ಜ್ ಹಾಗೂ ಗ್ರ್ಯಾಂಡ್ ಸ್ವಿಸ್ನಂತಹ ಪ್ರಮುಖ ಟೂರ್ನಿಗಳನ್ನು ಆಯೋಜಿಸಲು ಆರಂಭಿಸಿರುವ ಸಮಯದಲ್ಲಿ ಸಿಂದಾರೋವ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

''ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಸರಕಾರದ ಬೆಂಬಲ ನಿಜವಾಗಿಯೂ ಉತ್ತಮವಾಗಿತ್ತು. ಸರಕಾರವು ಅತ್ಯುತ್ತಮ ತರಬೇತುದಾರರೊಂದಿಗೆ ಕೆಲಸ ಮಾಡುವ ಅವಕಾಶಗಳನ್ನು ಸೃಷ್ಟಿಸಿದೆ. ಈ ಟೂರ್ನಿಯು ನಮಗೆ ಕಲಿಯಲು ಹಾಗೂ ಉತ್ತಮವಾಗಿ ಪ್ರದರ್ಶನ ನೀಡಲು ನೆರವಾಗುತ್ತದೆ. ಒಲಿಂಪಿಯಾಡ್ಗಗಿ ನಾವು ಬಲಿಷ್ಠ ತಂಡವನ್ನು ಹೊಂದಿದ್ದೇವೆ''ಎಂದು ಸಿಂದಾರೋವ್ ಹೇಳಿದ್ದಾರೆ.

ಪ್ರಸಕ್ತ ಟೂರ್ನಿಯ ಮೂರನೇ ಸುತ್ತಿನಲ್ಲಿ ಕಪ್ಪುಕಾಯಿಗಳಿಂದ ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದರನ್ನು ಸೋಲಿಸಿದ್ದ ಸಿಂದಾರೋವ್ ಎಲ್ಲರ ಗಮನ ಸೆಳೆದಿದ್ದರು. ಗರಿಷ್ಠ ರ್ಯಾಂಕಿನ ಆಟಗಾರ ಕರುವಾನಾ ವಿರುದ್ಧದ ಪಂದ್ಯದಲ್ಲೂ ಅದೇ ಹಿಡಿತವನ್ನು ಕಾಯ್ದುಕೊಂಡರು.

''ನಾನು 3.5 ಅಂಕ ಗಳಿಸುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಆದರೆ ನಾನು ಚೆನ್ನಾಗಿ ತಯಾರಿ ನಡೆಸಿದ್ದೆ. ಉಳಿದ ಸುತ್ತುಗಳಲ್ಲಿ ಪೂರ್ಣ ಏಕಾಗ್ರತೆಯೊಂದಿಗೆ ಆಡಬೇಕಾಗಿದೆ'' ಎಂದು ಸಿಂದಾರೋವ್ ಹೇಳಿದ್ದಾರೆ.

ಸಿಂದಾರೋವ್ 2025ರ ಫಿಡೆ ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ತಮ್ಮದೇ ದೇಶದ ಯಾಕುಬ್ಬೋವ್ ಹಾಗೂ ಫೈನಲ್ನಲ್ಲಿ ಚೀನಾದ ವೀ ಯಿ ಅವರನ್ನು ಸೋಲಿಸಿದ ನಂತರ 2026ರ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದರು.

ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಜಯಶಾಲಿಯಾಗುವ ಆಟಗಾರ ವಿಶ್ವ ಚಾಂಪಿಯನ್ ಡಿ.ಗುಕೇಶ್ರನ್ನು ಎದುರಿಸಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi